ವಿಜಯಸಾಕ್ಷಿ ಸುದ್ದಿ, ಗದಗ: ಹಿಂದುಳಿದ ವರ್ಗಗಳ ಏಳಿಗೆ ಹಾಗೂ ಸಾಮಾಜಿಕ ಸಮಾನತೆಗೆ ಭದ್ರ ಬುನಾದಿ ಹಾಕಿದ ದಿ. ಡಿ. ದೇವರಾಜ ಅರಸು ಅವರ ಕೊಡುಗೆ ಕರ್ನಾಟಕಕ್ಕೆ ಅಪಾರ. ಅವರು ತೋರಿದ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಇಂದಿನ ಪೀಳಿಗೆ ಸಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ನಗರದ ಮುಳಗುಂದ ರಸ್ತೆಯ ಕನಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ದಿ. ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬ ದೂರದೃಷ್ಟಿಯಿಂದ ಆಡಳಿತ ನಡೆಸಿದ ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಬಡ ರೈತರಿಗೆ ಭೂಮಿಯ ಹಕ್ಕು ಕಲ್ಪಿಸಿದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಿಸಲು ಮೀಸಲಾತಿ ಜಾರಿಗೆ ತಂದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಲು ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಶ್ರೀಧರ್ ಹೇಳಿದರು.
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹಾಗೂ ಉಪನ್ಯಾಸಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಅರಸು ಅವರು ಶೋಷಿತರು ಹಾಗೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಅವರ ಆಡಳಿತದ ಅವಧಿಯಲ್ಲಿ ಕೈಗೊಂಡ ಜನಪರ ಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ವಿ. ಬಳ್ಳಾರಿ ಮಾತನಾಡಿ, ಅರಸು ಅವರು ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು. ಗದಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ 48ಕ್ಕೂ ಹೆಚ್ಚು ವಸತಿ ನಿಲಯಗಳು ಮತ್ತು ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿವೆ ಎಂದರು.
ಜಿಲ್ಲಾ ಹಾಲುಮತ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ಅರಸು ಅವರ ಭೂಸುಧಾರಣೆ ಹಾಗೂ ಸಾಮಾಜಿಕ ನ್ಯಾಯದ ಯೋಜನೆಗಳು ಬಡವರು ಮತ್ತು ಶೋಷಿತರಲ್ಲಿ ಆತ್ಮಗೌರವದ ಬದುಕಿಗೆ ದಾರಿ ಮಾಡಿಕೊಟ್ಟಿವೆ. ಇಂದಿನ ಮಕ್ಕಳು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ವಿಜ್ಞಾನಿಗಳು ಹಾಗೂ ದೇಶಪ್ರೇಮಿಗಳಾಗಿ ಬೆಳೆಯಲು ಪೋಷಕರು ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ರಾಜ್ಯ ಹಾಲುಮತ ಸಂಘದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಪೂಜಾರ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ವೀರಣ್ಣ ಅಂಗಡಿ ಹಾಗೂ ಸಂಗಡಿಗರು ದೇವರಾಜ ಅರಸು ಅವರ ಕುರಿತು ಸ್ವರಚಿತ ಗೀತೆ ಹಾಗೂ ನಾಡಗೀತೆ ಪ್ರಸ್ತುತಪಡಿಸಿದರು.
“ಅರಸು ಅವರ ಸಾಧನೆಗಳನ್ನು ಸ್ಮರಿಸುವುದಷ್ಟೇ ಅಲ್ಲ, ಅವರು ತೋರಿದ ಹಾದಿಯಲ್ಲಿ ಸಾಗುವುದು ಹಾಗೂ ಸಮಾಜದ ಏಳಿಗೆಗೆ ಶ್ರಮಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.”
— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



