HomeBengaluru Cityಪ್ರಜ್ವಲ್ ರೇವಣ್ಣ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ: ಭದ್ರತೆ ನೀಡಲು ಕೋರ್ಟ್‌ ಸೂಚನೆ

ಪ್ರಜ್ವಲ್ ರೇವಣ್ಣ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ: ಭದ್ರತೆ ನೀಡಲು ಕೋರ್ಟ್‌ ಸೂಚನೆ

For Dai;y Updates Join Our whatsapp Group

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಪ್ರಮುಖ ಸಾಕ್ಷಿದಾರರಿಗೆ ಬೆದರಿಕೆ ಕರೆಗಳು ಬರುತ್ತಿರುವ ಗಂಭೀರ ವಿಷಯ ನ್ಯಾಯಾಲಯದ ಗಮನಕ್ಕೆ ಬಂದಿದೆ.

ಹೊಳೆನರಸೀಪುರ ಮೂಲದ ಮಹಿಳೆಯೊಬ್ಬರು ಆಗಸ್ಟ್ 20ರಂದು ನಡೆದ ವಿಚಾರಣೆ ವೇಳೆ, ಮುಖ್ಯ ವಿಚಾರಣೆ ಮುಗಿದ ಬಳಿಕ ಅಪರಿಚಿತರಿಂದ ನಿರಂತರವಾಗಿ ದೂರವಾಣಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ. ತಮ್ಮೊಂದಿಗೆ ಹಾಗೂ ತಮ್ಮ ಮಗನಿಗೆ ಯಾವುದೇ ಅಪಾಯ ಸಂಭವಿಸಿದರೆ ಪ್ರಕರಣದ ಆರೋಪಿಗಳೇ ಹೊಣೆಗಾರರು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಬೆದರಿಕೆ ಕರೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯೊಳಗೆ ತನಿಖೆಯ ವಿವರವಾದ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.

ಅಲ್ಲದೆ, ಸಾಕ್ಷಿದಾರೆಯ ಸುರಕ್ಷತೆಗೆ ಅಗತ್ಯವಿರುವ ಪೊಲೀಸ್ ಭದ್ರತೆ ಒದಗಿಸುವಂತೆ ಎಸ್‌ಐಟಿ ಹಾಗೂ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ನೋಡಿದರೆ, 2019ರಲ್ಲಿ ಸಂಸದರ ಕೋಟಾದಲ್ಲಿ ಪುತ್ರನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವ ಸಂಬಂಧ ಮಹಿಳೆ ಪ್ರಜ್ವಲ್ ರೇವಣ್ಣ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮಹಿಳೆಯ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದ ಪ್ರಜ್ವಲ್‌, 2019ರಿಂದ 2021ರ ಅವಧಿಯಲ್ಲಿ ಪದೇಪದೇ ಕರೆ ಮಾಡಿ ಅಶ್ಲೀಲವಾಗಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆಯ ಅನುಮತಿಯಿಲ್ಲದೆ ವಿಡಿಯೊ ಹಾಗೂ ಫೋಟೊಗಳನ್ನು ಸಂಗ್ರಹಿಸಿ, ಕರೆ ಸ್ವೀಕರಿಸದಿದ್ದರೆ ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ.

ಈ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ, ವಿವಸ್ತ್ರಗೊಳಿಸಲು ಬೆದರಿಕೆ, ಹಿಂಬಾಲಿಸುವಿಕೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸೇರಿವೆ. ಒಂದು ಪ್ರಕರಣದ ವಿಚಾರಣೆ ಈಗಾಗಲೇ ಪೂರ್ಣಗೊಂಡು ಶಿಕ್ಷೆ ವಿಧಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img