ಬೆಂಗಳೂರು: “ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನವಿರಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಶುಕ್ರವಾರ ಆಯೋಜಿಸಿದ್ದ “ಸಂವಾದ ಸಮ್ಮೇಳನ” ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ನಮ್ಮ ಸರ್ಕಾರ ತೆರೆದ ಪುಸ್ತಕ. ಹೊಸ ವಿಚಾರ, ಪರಿಹಾರಕ್ಕೆ ನಾವು ಮುಕ್ತರಾಗಿದ್ದೇವೆ. ನಮ್ಮ ತಪ್ಪುಗಳು, ಸಂಪನ್ಮೂಲ ಸೋರಿಕೆ ತಡೆಗಟ್ಟಲು ನಿಮ್ಮ ಸಲಹೆಗಳನ್ನು ನೀಡಿ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು, ಶಿವನಿಗಿಂತ ದೊಡ್ಡ ದೇವರು, ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಸರ್ವಜ್ಞ ಹೇಳಿದ್ದಾರೆ. ನೀವು ನಂಬಿಕೆಯ ರಕ್ಷಕರು. ನಂಬಿಕೆ ಎಂಬುದು ನಿಮ್ಮ ರಕ್ತದಲ್ಲೇ ಬಂದಿದ್ದು, ನೀವು ಅದನ್ನು ಉಳಿಸಿಕೊಳ್ಳಬೇಕು. ನೀವು ಹೇಳಿದ್ದನ್ನು ನಾವು ನಂಬುತ್ತೇವೆ. ನೀವು ನಮ್ಮ ಬದುಕು, ಆಸ್ತಿ ರಕ್ಷಿಸಿ ಆದಾಯಕ್ಕೆ ಮಾರ್ಗದರ್ಶನ ನೀಡಬೇಕು. ನಮ್ಮ ತಪ್ಪುಗಳನ್ನು ನಿವಾರಣೆ ಮಾಡುವ ಸಾಮಾರ್ಥ್ಯ ನಿಮಗಿದೆ. ನೀವು ದೇಶ ಕಟ್ಟುತ್ತಿದ್ದು, ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ” ಎಂದು ಪ್ರಶಂಸಿಸಿದರು.
“ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿ ಕುಗ್ಗಿಸುತ್ತಾರೆ. ಯಾರು ಕಳ್ಳತನ ಮಾಡುತ್ತಾರೆ ಅವರಿಗೆ ಪ್ರಶ್ನೆ ಮಾಡುವುದಿಲ್ಲ. ಈ ದೇಶದಲ್ಲಿ 12 ಲಕ್ಷ ಉದ್ಯಮಿಗಳು ಈ ದೇಶವನ್ನು ತ್ಯಜಿಸಿದ್ದಾರೆ. ಐಟಿ, ಇಡಿ, ಸಿಬಿಐ ಸಹವಾಸ ಸಾಕು ಎಂದು ಹೋಗುತ್ತಿದ್ದಾರೆ. ತೊಂದರೆ ಕೊಡುವುದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೆಲಸ. ಕೆಲವು ವರ್ಷಗಳ ಹಿಂದೆ ಗುಜರಾತ್ ಗೆ ಹೋಗಿದ್ದಾಗ ಅಲ್ಲಿ 70% ನಗದಿನಲ್ಲೇ ನಡೆಯುತ್ತಿದೆ. ಕೇವಲ 30% ಮಾತ್ರ ವೈಟ್ ಅಲ್ಲಿ ನಡೆಯುತ್ತಿದೆ. ನಮ್ಮ ಕರ್ನಾಟಕದಲ್ಲಿ 90% ವೈಟ್ ಮೂಲಕ ವ್ಯವಹಾರಗಳು ನಡೆಯುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಶಿಸ್ತುಬದ್ಧರಾಗಿದ್ದೇವೆ” ಎಂದರು.
“ಕರ್ನಾಟಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ನಿಮ್ಮ ಮಾರ್ಗದರ್ಶನವಿಲ್ಲದೇ ಅವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತ ಇಡಿ ದೇಶದ ಪ್ರಗತಿಯ ಇಂಧನವಾಗಿದೆ. ದಕ್ಷಿಣ ಭಾರತವಿಲ್ಲದೆ ಭಾರತದ ಪ್ರಗತಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮುಂದೆ ವಾದ ಮಂಡಿಸಿದೆವು. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವ ಬಂಡವಾಳ ಹೂಡಿಕೆದಾರರಿಗೆ ನೀವು ಉತ್ತಮ ಸಲಹೆ ನೀಡುತ್ತಿದ್ದೀರಿ. ಹೊಸ ಹೂಡಿಕೆ, ಉದ್ಯಮ, ಉದ್ಯೋಗ ಸೃಷ್ಟಿ, ಅನ್ವೇಷಣೆ, ರಫ್ತಿಗೆಗೆ ಕರ್ನಾಟಕ ಅತ್ಯುತ್ತಮ ಕೇಂದ್ರವಾಗಿದೆ” ಎಂದು ಹೇಳಿದರು.
“ಈ ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ ಅಧಿವೇಶನ ನಡೆಯುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಆದರೆ ಈಗ ಅಧಿವೇಶನ ನಡೆಯುತ್ತಿದೆ. ವಿರೋಧ ಪಕ್ಷದ ಬಿಜೆಪಿ ಸ್ನೇಹಿತರಿಗೆ ನನ್ನನ್ನು ಹಾಗೂ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಆಲೋಚನೆಗಳು ಸ್ಪಷ್ಟವಾಗಿದ್ದು, ನಮ್ಮ ಸರ್ಕಾರ ಜನಸಾಮಾನ್ಯರ ವಿಚಾರದಲ್ಲಿ ಕೈಗೊಳ್ಳುತ್ತಿರುವ ನೀತಿಗಳಿಂದಾಗಿ ಅವರಿಗೆ ನನ್ನ ವಿರುದ್ಧ ಹೋರಾಟ ಮಾಡಲು ಯಾವುದೇ ಅವಕಾಶಗಳಿಲ್ಲ. ಅಸೂಯೆಗೆ ಮದ್ದಿಲ್ಲ. ಹೀಗಾಗಿ ಅವರು ನಮಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ” ಎಂದರು.
“ನಿನ್ನೆ ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ದೇಶದ ಪ್ರಗತಿಗೆ ಸಹಕಾರಿಯಾಗಿದೆ. ನಾವು ಹಚ್ಚುವ ಜ್ಯೋತಿ ಹೇಗೆ ಕೆಳಗಿನಿಂದ ಮೇಲಕ್ಕೆ ಬೆಳಗುತ್ತದೆಯೋ ಅದೇ ರೀತಿ ದೇಶದ ಪ್ರಗತಿ ಕೂಡ ದಕ್ಷಿಣ ಭಾರತದಿಂದ ಬೆಳಗುತ್ತಿದೆ. ದೀಪ ಹಚ್ಚಿದಾಗ ಅದರ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರಲ್ಲಿರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನಮಗೆ ನ್ಯಾಯುತ ಪಾಲು ಬೇಕು. ನಾವು ನೀಡುತ್ತಿರುವ ಕೊಡುಗೆ ಹಾಗೂ ಪಡೆಯುತ್ತಿರುವ ಅನುದಾನದಲ್ಲಿರುವ ವ್ಯತ್ಯಾಸದ ಬಗ್ಗೆ ವಿಚಾರ ಮಂಡಿಸಲಾಗಿದೆ. ನಾವು ಹಚ್ಚು ಜ್ಯೋತಿ ಅಷ್ಟು ಸುಲಭವಾಗಿ ಆರುವುದಿಲ್ಲ. ರಾಜ್ಯದ ಜನರ ಬದುಕಿನಲ್ಲಿ ಬೆಳಕು ತರುತ್ತದೆ” ಎಂದು ತಿಳಿಸಿದರು.
“ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯ. ಭಾರತದ ಸಾಫ್ಟ್ವೇರ್ ರಪ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42ರಷ್ಟಿದೆ. ಇಲ್ಲಿರುವ ಪ್ರತಿಭೆಗಳನ್ನು ನೋಡಿ ವಿಶ್ವದ ಪ್ರಮುಖ 500 ಕಂಪನಿಗಳು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿವೆ. ಐಟಿ ಬಿಟಿ ಸೇರಿದಂತೆ ತಂತ್ರಜ್ಞಾನ, ಏರೋಸ್ಪೇಸ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಾಳತ್ವ ವಹಿಸುತ್ತಿದೆ” ಎಂದರು.
“ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ನಿಮ್ಮ ಮಾರ್ಗದರ್ಶನವಿಲ್ಲದೆ ರಾಜ್ಯ ಈ ಪ್ರಗತಿ ಸಾಧಿಸುತ್ತಿರಲಿಲ್ಲ. ದೇಶದ ಆರ್ಥಿಕತೆ ಉತ್ತಮವಾಗಿ ನಡೆಯುತ್ತಿರುವುದರ ಹಿಂದೆ ನಿಮ್ಮ ಮಾರ್ಗದರ್ಶನವಿದೆ. ದುಡ್ಡು, ಬ್ಲಡ್ ಎರಡೂ ಹರಿಯುತ್ತಿರಬೇಕು. ಬ್ಲಡ್ ಒಂದೇ ಕಡೆ ಇದ್ದರೆ ಆರೋಗ್ಯ ಹದಗೆಡುತ್ತದೆ, ಹಣ ಒಂದೇ ಕಡೆ ಸೇರಿಕೊಂಡರೆ ಆದಾಯ ತೆರಿಗೆ, ಜಿಎಸ್ ಟಿ, ಕಳ್ಳರು ಬರುತ್ತಾರೆ ಎಂದು ಸಾಯಿಬಾಬಾ ಅವರು ಒಮ್ಮೆ ಹೇಳಿದ್ದರು” ಎಂದು ಸ್ಮರಿಸಿದರು.



