ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರು ತನಿಖೆಯ ಬಳಿಕ ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಇ.ಡಿ. ಚಾರ್ಜ್ಶೀಟ್ನಲ್ಲೂ ನಾಗೇಂದ್ರ ಹೆಸರು ಉಲ್ಲೇಖವಾಗಿದೆ ಎಂದರು. ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿ, ಬೋವಿ ಸಮಾಜದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಡೆತ್ ನೋಟಿನಲ್ಲೂ ಅಂದಿನ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಹಣವನ್ನು ತೆಲಂಗಾಣ ರಾಜ್ಯಕ್ಕೆ ವರ್ಗಾಯಿಸಿದ್ದಾಗಿ ತಿಳಿಸಿದ್ದರು ಎಂದು ಗಮನ ಸೆಳೆದರು.
ಬಿಜೆಪಿ ಎತ್ತಿದ ಪ್ರಶ್ನೆ ಗಂಭೀರವಾಗಿದ್ದು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ಸಿನವರು ಕೊಳ್ಳೆ ಹೊಡೆದಿದ್ದಾರೆ ಎಂದ ವಿಜಯೇಂದ್ರ, ಇಂಥ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು, ಸಚಿವ ಸ್ಥಾನದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ಅಧಿವೇಶನ ಆರಂಭಕ್ಕೂ ಮೊದಲೇ ಇದನ್ನು ಹೇಳಲಾಗಿತ್ತು ಎಂದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲ, ನೀರಾವರಿ ಯೋಜನೆಗಳು, ಕೆಪಿಎಸ್ಸಿ ಹಗರಣದ ಕುರಿತು ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದರು.
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದರೆ ಅವರು ಭಂಡತನದಿಂದ ಮೆರೆಯುತ್ತಿದ್ದಾರೆ ಎಂದ ವಿಜಯೇಂದ್ರ, ಅಧಿಕಾರದ ಮದದಿಂದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದ್ದು, ಈ ಮದವನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಎಚ್ಚರಿಸಿದರು. ಸದನದಲ್ಲಿ ಹೋರಾಟ ಮಾಡುತ್ತಿದ್ದರೆ ತಮ್ಮನ್ನು ಗೂಂಡಾಗಳೆಂದು ಕರೆಯಲಾಗಿದೆ ಎಂದೂ, ದಲಿತರ ಪರವಾಗಿ ಧ್ವನಿ ಎತ್ತಿದ ಬಿಜೆಪಿ-ಜೆಡಿಎಸ್ನವರನ್ನು ಗೂಂಡಾಗಳೆಂದು ಕರೆಯುವುದೇ ಎಂದು ಪ್ರಶ್ನಿಸಿದರು.
187 ಕೋಟಿ ರೂ. ಹಣ ಲೂಟಿಯಾಗಿದ್ದು, ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆ ಹಣ ವಾಪಸ್ ಬಂದು ಆ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ತಿಳಿಸಿದ ವಿಜಯೇಂದ್ರ, ಎಲ್ಲಿಯವರೆಗೆ ಬೇಕೋ ಅಲ್ಲಿಯವರೆಗೆ ಹೋರಾಟಕ್ಕೆ ಸಿದ್ಧ ಎಂದು ಪ್ರಕಟಿಸಿದರು.



