ಮುಂಬೈ: ಮಹಾರಾಷ್ಟ್ರ ಲೋಕಸೇವಾ ಆಯೋಗ ನಡೆಸಿದ್ದ ಡ್ರಗ್ ಇನ್ಸ್‌ಪೆಕ್ಟರ್, ಗ್ರೂಪ್-ಬಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಮಾರ್ಚ್ 22ರಂದು ನಡೆದಿದ್ದ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ನಡೆದಿರುವ ಆರೋಪಗಳ ಕುರಿತು ನಡೆಸಿದ ಪ್ರಾಥಮಿಕ ತನಿಖೆಯ ಬಳಿಕ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಗಳಿಗಾಗಿ ಈ ಪರೀಕ್ಷೆ ನಡೆದಿತ್ತು. ಪರೀಕ್ಷೆಗೂ ಎರಡು ದಿನ ಮುನ್ನ, ಅಂದರೆ ಮಾರ್ಚ್ 20ರಂದೇ ಕೆಲ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಅದರಲ್ಲಿದ್ದ ಪ್ರಶ್ನೆಗಳು ಲಭ್ಯವಾಗಿದ್ದವು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಪ್ರಶ್ನೆಗಳು ಸಾಮಾಜಿಕ ಜಾಲತಾಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹರಿದಾಡಿದ್ದವು ಎನ್ನಲಾಗಿದೆ.
ಅಭ್ಯರ್ಥಿಗಳು ಹಾಗೂ ಜನಪ್ರತಿನಿಧಿಗಳಿಂದ ಇ-ಮೇಲ್ ಮೂಲಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಂಪಿಎಸ್‌ಸಿ ಪ್ರಾಥಮಿಕ ತನಿಖೆ ನಡೆಸಿತ್ತು. ಪರೀಕ್ಷಾ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳ ಆರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಲು ಆಯೋಗ ನಿರ್ಧರಿಸಿದೆ. ಹೊಸ ಪರೀಕ್ಷೆ ನಡೆಸುವ ಕುರಿತು ಮುಂದಿನ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಪರೀಕ್ಷೆ ರದ್ದಾದ ಬೆನ್ನಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ಸಂದೀಪ್ ದೇಶಪಾಂಡೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಗಂಭೀರವಾಗಿ ಕಂಡುಬಂದಿದ್ದರೆ ಈವರೆಗೆ ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿರುವ ಅವರು, ಪ್ರಕರಣದಲ್ಲಿ ಯಾರನ್ನಾದರೂ ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಸರ್ಕಾರಿ ಸಂಸ್ಥೆಗಳ ಯಾವುದೇ ರೀತಿಯ ಒಳಸಂಚು ಅಥವಾ ಕೈವಾಡವಿದೆಯೇ ಎಂಬುದನ್ನೂ ಸಮಗ್ರವಾಗಿ ತನಿಖೆ ನಡೆಸಬೇಕು ಎಂದೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಅವರು ಒತ್ತಾಯಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ರದ್ದಾಗಿರುವುದರಿಂದ ಈಗಾಗಲೇ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನಿಶ್ಚಿತತೆ ಎದುರಾಗಿದೆ.



