ಬಾಗಲಕೋಟೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾರಾಯಣಪುರ ಜಲಾಶಯದ ಪ್ರವಾಹ ಸಂತ್ರಸ್ತರ ತಾತ್ಕಾಲಿಕ ಶೆಡ್ಗಳು ಸುಟ್ಟು ಕರಕಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಶೆಡ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಂತ್ರಸ್ತರು ಪುರಾಣ ಕೇಳಲು ತೆರಳಿದ್ದ ವೇಳೆ ಶೆಡ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂತ್ರಸ್ತರು ಶೆಡ್ಗಳಲ್ಲೇ ಇದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಕಿಯ ತೀವ್ರತೆಗೆ ಶೆಡ್ಗಳಲ್ಲಿದ್ದ ದವಸ-ಧಾನ್ಯ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಸಾಮಗ್ರಿಗಳು ಸುಟ್ಟುಹೋಗಿವೆ. ಶೆಡ್ಗಳ ತಗಡುಗಳು ರಾಶಿ ರಾಶಿಯಾಗಿ ನೆಲಕ್ಕೆ ಬಿದ್ದಿದ್ದು, ಸಂತ್ರಸ್ತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುನಗುಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
17 ವರ್ಷಗಳಿಂದ ತಾತ್ಕಾಲಿಕ ಶೆಡ್ನಲ್ಲೇ ಜೀವನ:
2007-09ರ ಅವಧಿಯಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿನ ಪ್ರವಾಹದಿಂದ ಇದ್ದಲಗಿ ಗ್ರಾಮದ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಬಳಿಕ ಸಂತ್ರಸ್ತರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ಗಳಲ್ಲೇ ಹಲವು ಕುಟುಂಬಗಳು ಇಂದಿಗೂ ವಾಸಿಸುತ್ತಿವೆ.
ಸಂತ್ರಸ್ತರಿಗೆ ಶಾಶ್ವತವಾಗಿ ವಾಸಿಸಲು ಜಾಗ ಗುರುತಿಸಲಾಗಿದ್ದರೂ, ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಇನ್ನೂ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಸಂತ್ರಸ್ತರು ಕಳೆದ 117 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಬೆಂಕಿ ಅವಘಡ ಸಂಭವಿಸಿದ್ದು, ಒಂದೊಂದು ಶೆಡ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.
ತಾತ್ಕಾಲಿಕ ಶೆಡ್ಗಳಲ್ಲೇ ಹಲವು ವರ್ಷಗಳಿಂದ ಜೀವನ ನಡೆಸುತ್ತಿರುವ ಸಂತ್ರಸ್ತರಿಗೆ ಇದೀಗ ಅಗ್ನಿ ಅವಘಡ ಮತ್ತೊಂದು ಸಂಕಷ್ಟ ತಂದೊಡ್ಡಿದೆ.



