ಮಂಡ್ಯ: ಬೀದಿ ನಾಯಿಗಳ ಹಾವಳಿಗೆ ಐದು ಕುರಿಗಳು ಬಲಿಯಾಗಿದ್ದು, ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಕುದುರಗುಂಡಿ ಗ್ರಾಮದ ಪಾಪಣ್ಣ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ ವೇಳೆ ಬೀದಿ ನಾಯಿಗಳು ನುಗ್ಗಿವೆ. ಬಳಿಕ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ದಾಳಿ ನಡೆಸಿವೆ. ಏಕಾಏಕಿ ನಡೆದ ದಾಳಿಯಿಂದ ಕುರಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಐದು ಕುರಿಗಳು ಮೃತಪಟ್ಟಿವೆ. ಇನ್ನೂ ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.
ಪಾಪಣ್ಣ ಅವರು ಒಟ್ಟು ಎಂಟು ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು. ಕುರಿಗಳ ಸಾಕಾಣಿಕೆಯನ್ನೇ ಅವಲಂಬಿಸಿದ್ದ ರೈತನಿಗೆ ಒಂದೇ ರಾತ್ರಿ ಐದು ಕುರಿಗಳನ್ನು ಕಳೆದುಕೊಂಡಿರುವುದು ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಘಟನೆಯಿಂದ ಪಾಪಣ್ಣ ಹಾಗೂ ಅವರ ಕುಟುಂಬ ಕಂಗಾಲಾಗಿದೆ.
ಬೀದಿ ನಾಯಿಗಳ ಹಾವಳಿ ಗ್ರಾಮದಲ್ಲಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳು ಹಾಗೂ ಜಾನುವಾರುಗಳಿಗೆ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾತ್ರಿ ವೇಳೆ ಕೊಟ್ಟಿಗೆಗಳಿಗೆ ನುಗ್ಗುವ ನಾಯಿಗಳಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ:
ಕುರಿಗಳನ್ನು ಕಳೆದುಕೊಂಡಿರುವ ರೈತ ಪಾಪಣ್ಣ ಅವರಿಗೆ ಸಂಬಂಧಪಟ್ಟ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗಾಯಗೊಂಡಿರುವ ಮೂರು ಕುರಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ನಾಯಿಗಳನ್ನು ನಿಯಂತ್ರಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



