ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಜದೀವ್ ದ್ವೀಪದ ಸಮೀಪ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ್ದು, ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬೆಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಿದೆ ಎನ್ನಲಾಗಿದೆ.
ಬೋಟ್ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸಮಯೋಚಿತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
80 ಲಕ್ಷಕ್ಕೂ ಅಧಿಕ ನಷ್ಟ:
ಬೋಟ್ ಮುಳುಗಡೆಯಿಂದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರಿಕಾ ಪರಿಕರಗಳು ಸೇರಿದಂತೆ ₹80 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಮುದ್ರದಲ್ಲಿ ಅವಘಡ ಸಂಭವಿಸಿದ ವೇಳೆ ತಕ್ಷಣ ನೆರವಿಗೆ ಧಾವಿಸಿದ ಇತರೆ ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.



