ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ‘ಸೇವಾ ಸಂಕಲ್ಪ’ ಹೆಸರಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಪಕ್ಷ ಮುಂದಾಗಿದೆ.
ಅಭಿಯಾನದ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಇಂದು ನವದೆಹಲಿಯಲ್ಲಿ ಬಿಜೆಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ಹಾಗೂ ಎನ್ಡಿಎ ಆಡಳಿತದ ರಾಜ್ಯಗಳ ಆಯ್ದ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿವಾಸದಲ್ಲಿ ನಡೆಯಲಿರುವ ತರಬೇತಿ ಕಾರ್ಯಾಗಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸುಮಾರು 25 ಮುಖ್ಯಮಂತ್ರಿಗಳು ಹಾಗೂ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಸಾಧನೆಗಳು ಹಾಗೂ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ತಂತ್ರಗಾರಿಕೆ ರೂಪಿಸಲಾಗುವುದು. ಅಭಿಯಾನವನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ನಡೆಸುವ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಕಾರ್ಯಾಗಾರ ಮುಗಿದ ಬಳಿಕ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.
ಮೋದಿ ಅವರ ಸಾರ್ವಜನಿಕ ಜೀವನದ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಒಟ್ಟು 17 ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಸೇವೆ, ಅಭಿವೃದ್ಧಿ ಹಾಗೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದೇ ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.



