HomeIndia Newsಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬಸ್ ಸುರಕ್ಷತೆಗೆ ಕಠಿಣ ನಿಯಮ; ಪ್ಯಾನಿಕ್ ಬಟನ್, ಪರದೆ ನಿಷೇಧ ಕಡ್ಡಾಯ

ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬಸ್ ಸುರಕ್ಷತೆಗೆ ಕಠಿಣ ನಿಯಮ; ಪ್ಯಾನಿಕ್ ಬಟನ್, ಪರದೆ ನಿಷೇಧ ಕಡ್ಡಾಯ

For Dai;y Updates Join Our whatsapp Group

ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ಬೆನ್ನಲ್ಲೇ ದೆಹಲಿ ಸರ್ಕಾರ ಬಸ್‌ಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.

ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವಾಹನ ಟ್ರ್ಯಾಕಿಂಗ್ ಸಾಧನಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಎಂದು ಸಾರಿಗೆ ಇಲಾಖೆ ಹೊಸ ನಿರ್ದೇಶನ ಹೊರಡಿಸಿದೆ. ಬಸ್‌ಗಳ ಕಿಟಕಿಗಳಿಗೆ ಪರದೆ ಹಾಕುವುದನ್ನು ನಿಷೇಧಿಸಲಾಗಿದ್ದು, ಒಳಗೆ ಮತ್ತು ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುವಂತೆ ಕಿಟಕಿ ಹಾಗೂ ಗಾಜಿನ ಪಾರದರ್ಶಕತೆ ಕಾಪಾಡಬೇಕು ಎಂದು ಸೂಚಿಸಲಾಗಿದೆ.

ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ಕೃತ್ಯ ಎಸಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಬಾಲಕಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಕಿಟಕಿಗಳಿಗೆ ಪರದೆ ಹಾಕಲಾಗಿದ್ದು, ಇದರಿಂದ ಒಳಗಿನ ಚಟುವಟಿಕೆ ಹೊರಗಿನಿಂದ ಕಾಣದಂತಾಗಿತ್ತು ಎನ್ನಲಾಗಿದೆ. ಕಾನೂನಿನ ಪ್ರಕಾರ ಇರಬೇಕಾದ ಸಿಸಿಟಿವಿ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ.

ಆಗಸ್ಟ್ 4ರ ರಾತ್ರಿ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಚಾಲಕ ಮತ್ತು ಕಂಡಕ್ಟರ್ ಬಾಲಕಿಯನ್ನು ಕಾಶ್ಮೀರಿ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಗ್ರೇಟರ್ ನೋಯ್ಡಾದಿಂದ ಬಸ್ ಹತ್ತಿದ್ದು, ಅಲ್ಲಿಂದ 40 ಕಿ.ಮೀ.ಗೂ ಹೆಚ್ಚು ದೂರದ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು ಎನ್ನಲಾಗಿದೆ.

ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಈ ಹೊಸ ನಿರ್ದೇಶನಗಳು ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಅನ್ವಯಿಸಲಿದ್ದು, ಇತರ ರಾಜ್ಯಗಳ ಬಸ್‌ಗಳಿಗೂ ಇವು ಅನ್ವಯವಾಗಲಿವೆ. ಪ್ರತಿ ಬಸ್‌ನಲ್ಲಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಪ್ಯಾನಿಕ್ ಬಟನ್‌ಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಮತ್ತು ಪ್ಯಾನಿಕ್ ಬಟನ್ ಪ್ರಯಾಣಿಕರಿಗೆ ಸುಲಭವಾಗಿ ಸಿಗುವಂತಿರಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಬಸ್‌ನಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಾಧನ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಇರಬೇಕು. ರಾತ್ರಿ ವೇಳೆ ಅಥವಾ ಸಂಚಾರದಲ್ಲಿಲ್ಲದ ಸಮಯದಲ್ಲಿ ವಾಹನಗಳನ್ನು ಸುರಕ್ಷಿತ, ಅಧಿಕೃತ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲೇ ನಿಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ಕೂಡ ನಿಗದಿತ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img