ಬೆಂಗಳೂರು: ಕಾರು ಓವರ್ಟೇಕ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ಅಪಹರಣ ಮತ್ತು ಹಲ್ಲೆ ಆರೋಪದವರೆಗೆ ತಲುಪಿದೆ. ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ತನ್ನ ಸಹಪಾಠಿ ಮನೀಶ್ ಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡಿರುವ ಮನೀಶ್ ಗೌಡ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ರಾಜರಾಜೇಶ್ವರಿನಗರದಲ್ಲಿ ಘಟನೆಗೆ ಮುನ್ನ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದಾಗ, ಮನೀಶ್ ಗೌಡ ಮತ್ತು ಆತನ ಸ್ನೇಹಿತರು ಐ20 ಕಾರಿನಲ್ಲಿ ಬಂದು ಸಾಮ್ರಾಟ್ ಚಲಾಯಿಸುತ್ತಿದ್ದ ಕಾರನ್ನು ಓವರ್ಟೇಕ್ ಮಾಡಿದ್ದರು. ಇದರಿಂದಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್ವಿ ಯೂನಿವರ್ಸಿಟಿ ಹೊರಭಾಗದಲ್ಲಿದ್ದ ಮನೀಶ್ ಗೌಡನನ್ನು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಮನೀಶ್ ಗೌಡ ಮತ್ತು ಸಾಮ್ರಾಟ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪ್ರಕರಣದ ಕುರಿತು ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮನೀಶ್ ಪರ ವಕೀಲ ಮಂಜುನಾಥ್ ಮಾತನಾಡಿ, ಸಾಮ್ರಾಟ್ ವಿಜಯ್ ಅವರನ್ನು ಎ-1 ಆರೋಪಿಯನ್ನಾಗಿ ಹೆಸರಿಸಿ ಒಟ್ಟು ಆರು ಜನರ ವಿರುದ್ಧ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಸಣ್ಣ ವಿಚಾರಕ್ಕೆ ನಡೆದಿದ್ದ ಹಿಂದಿನ ದಿನದ ಗಲಾಟೆಯ ಬಳಿಕ ಸಾಮ್ರಾಟ್ ಹಾಗೂ ಆತನ ತಂಡ ಸಫಾರಿ ಕಾರಿನಲ್ಲಿ ಬಂದು ಮನೀಶ್ನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
“ನಿನ್ನೆ ಕಾರು ಓವರ್ಟೇಕ್ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇಂದು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಂದು ಮನೀಶ್ನನ್ನು ಕರೆದೊಯ್ದು, ಆರು ಜನರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ” ಎಂದು ವಕೀಲ ಮಂಜುನಾಥ್ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಕೆಲ ಗೊಂದಲಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.



