ಮಂಡ್ಯ: ಹುಟ್ಟುತ್ತಲೇ ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲಾಗಿದೆ.
ಜಾಗೃತಿ ಕಾರ್ಯಕ್ರಮಗಳಿಗಾಗಿ ಪೋಸ್ಟರ್‌ಗಳಿಗೆ ಖರ್ಚಾಗುತ್ತಿದ್ದ ಹಣವನ್ನು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಬಳಸಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಿಮ್ಸ್‌ನಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಮುಂದಾಗಿದ್ದಾರೆ. ವೈದ್ಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕೊಠಡಿಯನ್ನೇ ಸ್ವಚ್ಛಗೊಳಿಸಿ, ಸುಮಾರು ₹24.50 ಲಕ್ಷ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್ ಸಿದ್ಧಪಡಿಸಲಾಗಿದೆ.
ತಿಂಗಳಿಗೆ 250ಕ್ಕೂ ಹೆಚ್ಚು ನವಜಾತ ಶಿಶುಗಳ ದಾಖಲು:
ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಪ್ರತಿ ತಿಂಗಳು ಸುಮಾರು 250ಕ್ಕೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತವೆ. ಈ ಪೈಕಿ ಕನಿಷ್ಠ 50ರಿಂದ 60 ಶಿಶುಗಳಿಗೆ ತಾಯಿಯ ಎದೆಹಾಲು ಲಭ್ಯವಾಗದ ಪರಿಸ್ಥಿತಿ ಎದುರಾಗುತ್ತಿತ್ತು.
ಈ ಸಮಸ್ಯೆಯನ್ನು ಮನಗಂಡು ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದ್ದು, ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ದಾನಿ ತಾಯಂದಿರಿಂದ ಸಂಗ್ರಹಿಸಿದ ಎದೆಹಾಲು ಒದಗಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.
ಈ ಸತ್ಕಾರ್ಯಕ್ಕೆ ಜಿಲ್ಲೆಯ ಶಾಸಕರು ಕೂಡ ₹10.50 ಲಕ್ಷ ಅನುದಾನ ನೀಡಿ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಮಂಡ್ಯದಲ್ಲಿ ಸ್ಥಾಪನೆಯಾಗುತ್ತಿರುವ ಈ ಮಿಲ್ಕ್ ಬ್ಯಾಂಕ್ ರಾಜ್ಯದಲ್ಲೇ ಸ್ಥಾಪನೆಯಾಗುತ್ತಿರುವ 5ನೇ ಎದೆಹಾಲು ಶೇಖರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಿಮ್ಸ್ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್‌ಗಾಗಿ ಕೊಠಡಿ ಸಿದ್ಧವಾಗಿದ್ದು, ಸಿಬ್ಬಂದಿಯನ್ನೂ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಸಂರಕ್ಷಿಸಲು ಅಗತ್ಯವಿರುವ ಮೂರು ಪ್ರಮುಖ ಯಂತ್ರಗಳು ಇನ್ನೂ ಅಳವಡಿಕೆಯಾಗಬೇಕಿದೆ.
ಪಾಶ್ಚರೈಸರ್, ವರ್ಟಿಕಲ್ ಲ್ಯಾಮಿನಾರ್ ಮತ್ತು ಡೀಪ್ ಫ್ರೀಜರ್ ಯಂತ್ರಗಳನ್ನು ಅಳವಡಿಸಲು ಸುಮಾರು ₹36 ಲಕ್ಷ ಅನುದಾನದ ಅಗತ್ಯವಿದೆ.
ಈ ಯಂತ್ರಗಳು ಅಳವಡಿಕೆಯಾದ ಬಳಿಕ ದಾನಿ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲು ಸಾಧ್ಯವಾಗಲಿದೆ. ಸಂಗ್ರಹಿಸಿದ ಎದೆಹಾಲನ್ನು ಸುಮಾರು 6 ತಿಂಗಳವರೆಗೆ ಸಂರಕ್ಷಿಸಿಡಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.
ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ಮಿಲ್ಕ್ ಬ್ಯಾಂಕ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.



