HomeGadag News‘ನಾನು, ನನ್ನದು’ ಎಂಬ ಅಹಂಕಾರವೇ ನೆಮ್ಮದಿ ಕಸಿಯುತ್ತದೆ: ಡಾ. ರಾಜಶೇಖರ ದಾನರಡ್ಡಿ

‘ನಾನು, ನನ್ನದು’ ಎಂಬ ಅಹಂಕಾರವೇ ನೆಮ್ಮದಿ ಕಸಿಯುತ್ತದೆ: ಡಾ. ರಾಜಶೇಖರ ದಾನರಡ್ಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ‘ನಾನು… ನನ್ನದು… ನಾನು ಮಾಡಿದೆ…’ ಎಂಬ ಅಹಂಕಾರದ ಭಾವನೆಯೇ ಮನುಷ್ಯನ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ತನು, ಮನ, ಧನ, ಮನೆ, ಸತಿ-ಸುತರ ಮೇಲಿನ ಅತಿಯಾದ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದಾಗ ಮಾತ್ರ ಜೀವನದಲ್ಲಿ ನಿಜವಾದ ಸುಖ, ಸಂತೋಷ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜಶೇಖರ ದಾನರಡ್ಡಿ ಹೇಳಿದರು.

ಎಸ್‌ವೈಬಿಎಂಎಸ್ ಯೋಗಪಾಠಶಾಲೆ, ಗದಗ, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವಚನಪಾಠಶಾಲೆ ಹಾಗೂ ಸಿದ್ಧಲಿಂಗನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಸಾಪ್ತಾಹಿಕ ವಚನ ಶ್ರಾವಣ-೨೦೨೬ ಕಾರ್ಯಕ್ರಮದ ಮೂರನೇ ಶ್ರಾವಣ ಸೋಮವಾರದ ಅಂಗವಾಗಿ ಅವರು ಷಣ್ಮುಖಸ್ವಾಮಿಯವರ ವಚನದ ಭಾವಾರ್ಥವನ್ನು ವಿಶ್ಲೇಷಿಸಿ ಮಾತನಾಡಿದರು.

ಮಾನವ ಮೂಲತಃ ಅಹಂಕಾರದ ಜೀವಿಯಾಗಿದ್ದು, ನಾನು, ನನ್ನದು, ನಾನು ಮಾಡಿದೆ ಎಂಬ ಭಾವದಿಂದ ಮೆರೆಯುತ್ತಾನೆ. ಆದರೆ ಈ ಅಹಂಕಾರ ಶಾಶ್ವತವಾದುದಲ್ಲ. ತಾನು ಕಟ್ಟಿಸಿದ ಮನೆ ಹಾಳಾದಾಗ, ಗಳಿಸಿದ ಸಂಪತ್ತು ಕಳೆದುಹೋದಾಗ ಅಥವಾ ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ಇದೇ ಮನುಷ್ಯ ದುಃಖಕ್ಕೆ ಒಳಗಾಗುತ್ತಾನೆ ಎಂದು ಹೇಳಿದರು.

ನಾನಿರುವುದು ಭಗವಂತನ ಕೃಪೆಯಿಂದ. ನಾನು ಮಾಡುವ ಪ್ರತಿಯೊಂದು ಕಾರ್ಯವೂ ದೇವರಿಗಾಗಿ, ಅಂದರೆ ಸಮಾಜದ ಒಳಿತಿಗಾಗಿ ಎಂಬ ಮನೋಭಾವದಿಂದ ಬದುಕಬೇಕು. ನಮ್ಮೊಳಗಿನ ಅಹಂಕಾರ ಕರಗಿ ಸಮರ್ಪಣಾ ಭಾವ ಮೂಡಿದಾಗ ಮಾತ್ರ ನಿಜವಾದ ಸಂತೋಷದ ಬದುಕು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಮಾತನಾಡಿ, ಹಿಂದೆ ನಿರ್ದಿಷ್ಟ ಕಾಯಕಗಳನ್ನು ನಿರ್ದಿಷ್ಟ ವರ್ಗದವರೇ ಮಾಡಬೇಕು ಎಂಬ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ ಇಂದು ಯಾವುದೇ ಕಾಯಕವನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಮಾಡುವ ಕಾಯಕದಲ್ಲಿ ಶ್ರದ್ಧೆ ಇರಬೇಕು ಹಾಗೂ ನಮ್ಮ ಕಾರ್ಯ ಇತರರಿಗೆ ಮಾರ್ಗದರ್ಶನವಾಗುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲ್ವತವಾಡಮಠ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ಸ್ವಾರ್ಥತೆಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಮರ್ಪಣಾ ಭಾವದಿಂದ ಶ್ರಮಿಸಿದರೆ ದೇಶ ಇನ್ನಷ್ಟು ವೇಗವಾಗಿ ಪ್ರಗತಿಯ ಪಥದಲ್ಲಿ ಮುನ್ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷೆ ಅನ್ನಪೂರ್ಣಕ್ಕ ವರವಿ, ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಹಾಗೂ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಉಪಸ್ಥಿತರಿದ್ದು, ಕಾರ್ಯಕ್ರಮದ ಸೇವಾಕರ್ತರನ್ನು ಗೌರವಿಸಿದರು.

ವಿಶೇಷವಾಗಿ ಸುನಂದಾ ಜ್ಞಾನೋಪಂತರ ಹಾಗೂ ಚಂದ್ರಕಲಾ ಸ್ಥಾವರಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಯೋಗಪಾಠಶಾಲೆ, ವಚನಪಾಠಶಾಲೆ ಹಾಗೂ ಯೋಗ ವಿಜ್ಞಾನ ಕೇಂದ್ರದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಸಂಗೀತ ನಾಕೋಡ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಅರುಣಾ ಇಂಗಳಳ್ಳಿ ಸ್ವಾಗತಿಸಿದರು. ಶಾಂತಾ ಮುಂದಿನಮನಿ ಧರ್ಮಗ್ರಂಥ ಪಠಣ ಮಾಡಿದರು. ಬಸವರಾಜ ತೋಟಿಗೇರ ಸಂವಿಧಾನವನ್ನು ಓದಿ ತಿಳಿಸಿದರು. ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಸುಲೋಚನಾ ಐಹೊಳೆ ಕಾರ್ಯಕ್ರಮ ನಿರೂಪಿಸಿದರು.

ತನು, ಮನ, ಧನ, ಮನೆ ಎಂಬ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದರೆ ಅಹಂಕಾರ ಕರಗಿ ಜೀವನದಲ್ಲಿ ನಿಜವಾದ ಸುಖ ಮತ್ತು ನೆಮ್ಮದಿ ದೊರೆಯುತ್ತದೆ.

— ಡಾ. ರಾಜಶೇಖರ ದಾನರಡ್ಡಿ, ಸಹ ಪ್ರಾಧ್ಯಾಪಕ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img