HomeGadag Newsಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಲಿ: ಅನ್ನಪೂರ್ಣ ವರವಿ

ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಲಿ: ಅನ್ನಪೂರ್ಣ ವರವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಆತ್ಮವಿಶ್ವಾಸವು ವ್ಯಕ್ತಿಯಲ್ಲಿ ಇತರರೊಂದಿಗೆ ಬೆರೆಯುವ ಗುಣ, ಸ್ವಯಂಪ್ರೇರಣೆ, ಕಲಿಕೆಯ ಆಸಕ್ತಿ, ಅನ್ವೇಷಣಾ ಪ್ರವೃತ್ತಿ, ಪ್ರಶ್ನಿಸುವ ಮನೋಭಾವ ಹಾಗೂ ಸೃಜನಶೀಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಬೇಕು ಎಂದು ಚಿಂತಕಿ ಅನ್ನಪೂರ್ಣ ವರವಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧೫ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಆಯೋಜಿಸಲಾಗುವ ‘ಅಮೃತಭೋಜನ-ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಗಳಲ್ಲಿ ಮುನ್ನಡೆ ಸಾಧಿಸಲು ಆತ್ಮವಿಶ್ವಾಸವೇ ಯಶಸ್ಸಿನ ಮುನ್ನುಡಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಸಿಹಿ ವಿತರಿಸಿದ ಶಾಲೆಯ ಎಸ್‌ಡಿಎಂಸಿ ಸದಸ್ಯ ಶ್ರೀನಿವಾಸ ಬೇವಿನಕಟ್ಟಿ ಮಾತನಾಡಿ, ಉತ್ತಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರಂತಹ ಮಹನೀಯರ ಚಿಂತನೆಗಳು ಜೀವನಕ್ಕೆ ಪ್ರೇರಣೆ ನೀಡುತ್ತವೆ. ಆದ್ದರಿಂದ ಮಕ್ಕಳು ಹಿರಿಯರು ಹಾಗೂ ದಾರ್ಶನಿಕರ ನಡೆ-ನುಡಿಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕಿ ಸುವರ್ಣ ಗುರಮ್ಮನವರ ಅವರು ಮಕ್ಕಳಿಗೆ ಗಾದೆಮಾತುಗಳ ಕುರಿತು ತಿಳುವಳಿಕೆ ನೀಡಿದರು. ಹಿರಿಯರ ಅನುಭವದ ಸಾರವೇ ಗಾದೆಮಾತುಗಳಾಗಿದ್ದು, ಅವು ಚಿಕ್ಕದಾಗಿದ್ದರೂ ಅರ್ಥಪೂರ್ಣವಾಗಿರುತ್ತವೆ. ಪ್ರತಿಯೊಂದು ಗಾದೆಯೂ ಒಂದೊಂದು ಜೀವನ ಸಂದೇಶವನ್ನು ಒಳಗೊಂಡಿದ್ದು, ಅವುಗಳ ಅರ್ಥವನ್ನು ತಿಳಿದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕದಳಿಶ್ರೀ ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಮಾತನಾಡಿ, ಶ್ರಾವಣ ಮಾಸದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸರ್ಕಾರಿ ಶಾಲೆಗಳಿಗೆ ಆಹ್ವಾನಿಸಿ, ಅವರ ಅಮೃತವಾಣಿಯ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳು ಹಾಗೂ ಪ್ರೇರಣಾದಾಯಕ ವಿಚಾರಗಳನ್ನು ತಿಳಿಸಲಾಗುತ್ತಿದೆ. ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಮುದಾಯವನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಕಾರ್ಯವನ್ನು ವೇದಿಕೆ ನಿರಂತರವಾಗಿ ನಡೆಸುತ್ತಿದೆ ಎಂದರು.

ವಿದ್ಯಾರ್ಥಿನಿಯರಾದ ಅರ್ಚನಾ ಯಂಡಿಗೇರಿ, ಲೋಕೇಶ್ವರಿ ಮುಧೋಳ ಹಾಗೂ ಮಲ್ಲಿಕಾ ದಹಿಂಡೆ ವಚನ ಪ್ರಾರ್ಥನೆ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ವಿ.ಎನ್. ಬಸಾಪೂರ ಸ್ವಾಗತಿಸಿದರು. ಬಿ. ಯಶೋಧಾ ನಿರೂಪಿಸಿದರು. ವಿ.ಬಿ. ಕರಬಸಗೌಡರ ವಂದಿಸಿದರು.

ರೇಣುಕಾ ಗೌಳಿಕೇರ, ಗಿರಿಜಾ ದಾಸರ, ಮಹಾದೇವಿ ಮೊಸಳಿ, ವಿನೋದಾ ಕೆಳಗಿನಮನಿ, ಪ್ರಿಯಾಂಕಾ ಲಮಾಣಿ, ರೇಖಾ ಮೂಗನೂರ, ರೇಣುಕಾ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img