HomeGadag Newsಧರ್ಮಭೇದ ಮರೆತು ಮಕ್ಕಳ ಕೈಹಿಡಿಯುವ ಸಮಾಜ ನಿರ್ಮಾಣವಾಗಲಿ: ಯು.ಟಿ. ಖಾದರ್

ಧರ್ಮಭೇದ ಮರೆತು ಮಕ್ಕಳ ಕೈಹಿಡಿಯುವ ಸಮಾಜ ನಿರ್ಮಾಣವಾಗಲಿ: ಯು.ಟಿ. ಖಾದರ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ವಿವಿಧ ಧರ್ಮಗಳ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಕೈಕೈ ಹಿಡಿದು ಓಡಾಡುವಂತಹ ಸಾಮರಸ್ಯದ ಸಮಾಜ ನಿರ್ಮಾಣವಾಗಬೇಕು. ಕ್ಷೇತ್ರದಲ್ಲಿ ಇಂತಹ ವಾತಾವರಣ ನಿರ್ಮಿಸಲು ಆದ್ಯತೆ ನೀಡುವ ಜನಪ್ರತಿನಿಧಿಯೇ ನಿಜವಾದ ಅರ್ಥದಲ್ಲಿ ಯಶಸ್ವಿ ನಾಯಕನಾಗಬಲ್ಲರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಪಟ್ಟಣದ ಭಾವೈಕ್ಯತೆಯ ಕೇಂದ್ರ ಹಜರತ್ ಸಯ್ಯದ್ ಸುಲೇಮಾನ್ ಬಾದಷಾ ಖಾದ್ರಿ (ದೂದನಾನಾ) ದರ್ಗಾಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾದಿಮಹಲ್‌ನಲ್ಲಿ ದರ್ಗಾ ಕಮಿಟಿ, ಅಂಜುಮನ್ ಕಮಿಟಿ ಹಾಗೂ ವಿವಿಧ ಸಮಾಜಗಳ ವತಿಯಿಂದ ನಡೆದ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಭಾವೈಕ್ಯತೆಗೆ ಮತ್ತೊಂದು ಹೆಸರು ಲಕ್ಷ್ಮೇಶ್ವರ. ಈ ನೆಲದಲ್ಲಿ ನಡೆದಾಡಿದ ದೇವಮಾನವರು ‘ಮಾನವ ಧರ್ಮಕ್ಕೆ ಜಯವಾಗಲಿ, ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ಸಾರ್ವಕಾಲಿಕ ಸಂದೇಶ ನೀಡಿದ್ದಾರೆ. ಇಲ್ಲಿನ ಜನರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಭಾರತದ ಸಂಸ್ಕೃತಿಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದಾಗಿದೆ. ಸಂತರು, ಶರಣರು ಹಾಗೂ ಸೂಫಿ ಸಂತರು ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿ ಎಂದರು.

ಧರ್ಮ, ಜಾತಿ ಸೇರಿದಂತೆ ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದರೂ ಸಮಾಜದ ಶಾಂತಿಗೆ ಧಕ್ಕೆ ಬಾರದಂತೆ ಪರಸ್ಪರ ಕುಳಿತು ಪ್ರೀತಿ, ವಿಶ್ವಾಸದಿಂದ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ‘ನಾವೆಲ್ಲರೂ ಭಾರತೀಯರು’ ಎಂಬ ಭಾವನೆಯೊಂದಿಗೆ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಯುವಕರು ಹಿರಿಯರ ಜೀವನಾನುಭವದಿಂದ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು ಎಂದರು.

ಪಾಲಕರು ಮಕ್ಕಳಿಗೆ ಊಟ, ಬಟ್ಟೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸುವುದಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ ದೊರೆತರೆ ಮಕ್ಕಳು ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸುವ ಸಾಮರ್ಥ್ಯ ಪಡೆಯುತ್ತಾರೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಕುಟುಂಬ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಪಟ್ಟಣದ ಸೋಮೇಶ್ವರ ದೇವಸ್ಥಾನ ಹಾಗೂ ದೂದನಾನಾ ದರ್ಗಾಕ್ಕೆ ಭೇಟಿ ನೀಡಿ ಜನರ ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ. ಮಂದಿರ, ಮಸೀದಿ, ಬಸದಿಗಳ ಜೀರ್ಣೋದ್ಧಾರ ಹಾಗೂ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಬಂದ ಮನವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸುವುದಾಗಿ ಖಾದರ್ ತಿಳಿಸಿದರು.

ಶಿಗ್ಗಾಂವ ಕ್ಷೇತ್ರದ ಶಾಸಕ ಯಾಸೀರಅಹ್ಮದ್ ಖಾನ್ ಪಠಾಣ ಮಾತನಾಡಿ, ಜನಪ್ರತಿನಿಧಿಯ ಯಶಸ್ಸನ್ನು ಕೇವಲ ರಸ್ತೆ, ಚರಂಡಿ ಹಾಗೂ ಕಟ್ಟಡಗಳಂತಹ ಅಭಿವೃದ್ಧಿ ಕಾಮಗಾರಿಗಳಿಂದ ಅಳೆಯಲಾಗದು. ಕ್ಷೇತ್ರದ ಜನರಲ್ಲಿ ಪರಸ್ಪರ ವಿಶ್ವಾಸ ಬೆಳೆಸಿ, ಎಲ್ಲ ಸಮುದಾಯಗಳ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವುದೂ ಜನಪ್ರತಿನಿಧಿಯ ಪ್ರಮುಖ ಕರ್ತವ್ಯ. ಮಕ್ಕಳಲ್ಲಿ ಬಾಲ್ಯದಿಂದಲೇ ಸಮಾನತೆ, ಸಹೋದರತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನ ಕಣಕೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಟಿ.ಈಶ್ವರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಹಾವೇರಿ ಲೋಕಸಭಾ ಕ್ಷೇತ್ರದ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹುಮಾಯೂನ್ ಮಾಗಡಿ, ಗುರುನಾಥ ದಾನಪ್ಪನವರ, ಜಿ.ಆರ್.ಕೊಪ್ಪದ, ಅಂಜುಮನ್ ಸಂಸ್ಥೆ ಅಧ್ಯಕ್ಷ ಜಮೀಲ ಸೂರಣಗಿ, ಎಸ್.ಕೆ.ಹವಾಲ್ದಾರ, ಫಿರ್ಧೋಶ ಆಡೂರ, ಸಿಕಂದರ ಕಣಿಕೆ, ಜಮೀಲಮ್ಮದ ಸೂರಣಗಿ, ಎಂ.ಎಂ.ಗದಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜನಪ್ರತಿನಿಧಿಯ ಯಶಸ್ಸನ್ನು ಕೇವಲ ರಸ್ತೆ, ಚರಂಡಿ ಹಾಗೂ ಕಟ್ಟಡಗಳ ಅಭಿವೃದ್ಧಿಯಿಂದ ಅಳೆಯಲಾಗದು. ಎಲ್ಲ ಸಮುದಾಯಗಳ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವುದೂ ಪ್ರಮುಖ ಕರ್ತವ್ಯ.

— ಯಾಸೀರಅಹ್ಮದ್ ಖಾನ್ ಪಠಾಣ, ಶಾಸಕ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img