ಬೆಂಗಳೂರು: ನಗರದ ಕೆ.ಪಿ. ಅಗ್ರಹಾರ ದಾಸರಹಳ್ಳಿ ಮನೆಯಲ್ಲಿ ಇದ್ದ ಯುವತಿಯನ್ನು ಅಪಹರಿಸಿ ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಗಳು, ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಭಾರೀ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ.
ಅಪಹರಣಕಾರರ ಕಾರು ಎದುರಿಗೆ ಸಿಕ್ಕ ಜಡ್ಜ್ ಹಾಗೂ ಪೊಲೀಸರ ಕಾರು ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು ಮತ್ತು 100ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ರಾಜಸ್ಥಾನದಿಂದ ಬಂದಿದ್ದ ಗ್ಯಾಂಗ್‌ನ ಈ ಕೃತ್ಯದಿಂದಾಗಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಪೃಥ್ವಿರಾಜ್ (12), ಯಶಿಕಾ (9), ಅಮುಲ್ (35), ವರ್ಷ, ಮಣಿ (64) ಹಾಗೂ ಜಯಲಕ್ಷ್ಮೀ (57) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸುಮಾರು 9 ಕಿಲೋಮೀಟರ್‌ವರೆಗೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿಗಳು, ದಾರಿಯಲ್ಲಿ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ.
ಕೊನೆಗೆ ವಿಜಯನಗರದ ಹೊಸಹಳ್ಳಿ 4ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಆರೋಪಿಗಳನ್ನು ಹಿಡಿದಿದ್ದಾರೆ. ಆಕ್ರೋಶಗೊಂಡಿದ್ದ ಕೆಲವರು ಕಾರಿನ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದು, ಕಾರಿನಲ್ಲಿದ್ದ ಮೂವರನ್ನು ಹೊರಗೆಳೆದು ಥಳಿಸಿದ್ದಾರೆ. ಬಳಿಕ ಆರೋಪಿಗಳನ್ನು ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರ ದಾಳಿಯಲ್ಲಿ ಗಾಯಗೊಂಡ ಆರೋಪಿಗಳಾದ ರಾಕೇಶ್ (31), ಕರಣ್ (35) ಹಾಗೂ ಆಯನ್ (18) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಲಾಯಿಸುತ್ತಿದ್ದ ಸದ್ದಾಂ ಎಂಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.



