ಕಲಬುರಗಿ: ನಗರದ ಹೈಕೋರ್ಟ್ ಕ್ರಾಸ್ ಬಳಿ ಯಾವುದೇ ಪೂರ್ವಾನುಮತಿ ಪಡೆಯದೆ ರಾತ್ರೋರಾತ್ರಿ ಗುಂಪೊಂದು ಪ್ರತಿಷ್ಠಾಪಿಸಿದ್ದ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ್ದಾರೆ.
ಸಿಎಂ ಪ್ರವಾಸದ ಮಾರ್ಗದಲ್ಲೇ ಮೂರ್ತಿ ಸ್ಥಾಪನೆ: ಸೆಪ್ಟೆಂಬರ್ 16 ರಂದು ರಾತ್ರಿ ಏಳೆಂಟು ಜನರಿದ್ದ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಸ್ಥಾಪನೆ ಮಾಡಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿ ಪ್ರವಾಸದಲ್ಲಿದ್ದು, ಇದೇ ಮಾರ್ಗದಲ್ಲೇ ಸಂಚರಿಸಬೇಕಿತ್ತು. ಸಿಎಂ ಆಗಮನದ ವೇಳೆಯಲ್ಲೇ ಈ ರೀತಿ ಪ್ರತಿಮೆ ಸ್ಥಾಪನೆಯಾಗಿದ್ದು ಸ್ಥಳದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಪಾಲಿಕೆಯಿಂದ ಮೂರ್ತಿ ತೆರವು ಕಾರ್ಯಾಚರಣೆ: ಯಾವುದೇ ಅನುಮತಿ ಪಡೆಯದೆ ಪ್ರತಿಷ್ಠಾಪನೆ ಮಾಡಿದ್ದ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಈ ಹಿಂದೆ 2-3 ವರ್ಷಗಳ ಹಿಂದೆಯೂ ಸಹ ಯಾವುದೇ ಅನುಮತಿ ಪಡೆಯದೇ ಇದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರದ ಬ್ಯಾನರ್ ಅಳವಡಿಸಿ, ‘ಸಿದ್ದರಾಮಯ್ಯ ಸರ್ಕಲ್’ ನಿರ್ಮಾಣ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



