HomeKarnataka Newsನಾಪತ್ತೆಯಾಗಿದ್ದ KPSC ಸದಸ್ಯ ಶಾಂತಾ ಹೊಸಮನಿ ಕೊನೆಗೂ ವಿಚಾರಣೆಗೆ ಹಾಜರು!

ನಾಪತ್ತೆಯಾಗಿದ್ದ KPSC ಸದಸ್ಯ ಶಾಂತಾ ಹೊಸಮನಿ ಕೊನೆಗೂ ವಿಚಾರಣೆಗೆ ಹಾಜರು!

For Dai;y Updates Join Our whatsapp Group

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಕೊನೆಗೂ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ 52ನೇ ಸಿಸಿಹೆಚ್‌ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಅವರು ಸಿಐಡಿ ಮುಂದೆ ಹಾಜರಾಗಿದ್ದಾರೆ.

ಕೆಎಎಸ್, ಪಶುವೈದ್ಯಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (AEE) ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಹುದ್ದೆ ಕೊಡಿಸಲು ಮುಂದಾಗಿದ್ದರು ಎಂಬ ಗಂಭೀರ ಆರೋಪಗಳು ಡಾ. ಶಾಂತಾ ಹೊಸಮನಿ ಅವರ ಮೇಲಿವೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಕೈಗೆತ್ತಿಕೊಂಡ ಬಳಿಕ ಶಾಂತಾ ಹೊಸಮನಿ ಅವರು ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ತನಿಖಾ ಸಂಸ್ಥೆಗಳು ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಿದ್ದವು.

ಇನ್ನು 2023-24ನೇ ಸಾಲಿನ ಕೆಎಎಸ್ ಪರೀಕ್ಷೆ ಬರೆದು ಸಂದರ್ಶನ ಮುಗಿಸಿ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿ ಮಮಿತಾ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವೂ ಪ್ರಕರಣದಲ್ಲಿದೆ. ಈ ಆರೋಪದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಕಲಬುರಗಿ ನಗರದ ನ್ಯೂ ಓಝಾ ಲೇಔಟ್‌ನಲ್ಲಿರುವ ಮಮಿತಾ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದರು.

ಈ ನಡುವೆ ಕಳೆದ ವಾರ ಬೆಂಗಳೂರಿನ 52ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ಶಾಂತಾ ಹೊಸಮನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಇಂದು ಸಿಐಡಿ ಮುಂದೆ ಹಾಜರಾಗಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಡಾ. ಶಾಂತಾ ಹೊಸಮನಿ ಅವರು 2021ರ ಜೂನ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದರು. ಆಗಿನ ರಾಜ್ಯ ಸರ್ಕಾರವು ಅಧಿಕಾರಿಗಳ ವರ್ಗದ ಅಡಿಯಲ್ಲಿ ಅವರನ್ನು ಆರು ವರ್ಷಗಳ ಅವಧಿಗೆ ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಅವರು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಸದ್ಯ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ತನಿಖೆ ಮುಂದುವರಿದಿದ್ದು, ಶಾಂತಾ ಹೊಸಮನಿ ಅವರ ವಿಚಾರಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img