ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಮತ್ತು ಗಲ್ಫ್ ಪ್ರದೇಶದಲ್ಲಿನ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಇಂಧನ ಸಂರಕ್ಷಣೆ ಹಾಗೂ ವೆಚ್ಚ ಕಡಿತಕ್ಕೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ.
ಸರ್ಕಾರಿ ವಾಹನಗಳಿಗೆ ನೀಡಲಾಗುವ ಇಂಧನ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಸೇನೆ, ಕಾನೂನು ಜಾರಿ ಸಂಸ್ಥೆಗಳು, ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಸರ್ಕಾರಿ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿಗೂ ಸಂಪೂರ್ಣ ನಿಷೇಧ ಹೇರಲಾಗಿದೆ. ಜೊತೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರ ವಿದೇಶ ಪ್ರವಾಸಗಳಿಗೆ ಮೂರು ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಅನಿವಾರ್ಯ ಪ್ರವಾಸವಿದ್ದರೆ ಎಕಾನಮಿ ಕ್ಲಾಸ್‌ನಲ್ಲೇ ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ.
ಅಗತ್ಯವಿಲ್ಲದ ಸರ್ಕಾರಿ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಸೂಚಿಸಲಾಗಿದ್ದು, ಸರ್ಕಾರಿ ಔತಣಕೂಟಗಳು, ಅನಗತ್ಯ ವಿಚಾರಸಂಕಿರಣಗಳು ಹಾಗೂ ತರಬೇತಿ ಕಾರ್ಯಕ್ರಮಗಳ ಮೇಲೂ ನಿರ್ಬಂಧ ಹೇರಲಾಗಿದೆ.
ವಿದ್ಯುತ್ ಉಳಿತಾಯಕ್ಕಾಗಿ ಅಂಗಡಿ, ಮಾರುಕಟ್ಟೆ ಮತ್ತು ಶಾಪಿಂಗ್ ಮಾಲ್‌ಗಳನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಮದುವೆ ಮಂಟಪಗಳು ರಾತ್ರಿ 10 ಗಂಟೆಗೆ ಹಾಗೂ ರೆಸ್ಟೋರೆಂಟ್‌ಗಳು ರಾತ್ರಿ 11 ಗಂಟೆಯೊಳಗೆ ಬಂದ್ ಆಗಬೇಕು ಎಂದು ಸರ್ಕಾರ ಸೂಚಿಸಿದೆ. ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ‘ಸಿಂಗಲ್ ಡಿಶ್’ ನಿಯಮ ಮುಂದುವರಿಯಲಿದೆ.
ಗಲ್ಫ್ ಸಂಘರ್ಷದಿಂದ ಎಲ್‌ಎನ್‌ಜಿ ಪೂರೈಕೆಗೆ ಅಡಚಣೆ ಉಂಟಾಗುವ ಆತಂಕದ ನಡುವೆಯೇ ಇಂಧನ ಬಳಕೆಯನ್ನು ನಿಯಂತ್ರಿಸಲು ಪಾಕಿಸ್ತಾನ ಈ ಕ್ರಮಗಳನ್ನು ಕೈಗೊಂಡಿದೆ.

