ಲಂಡನ್: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಸದ್ಯ ಯುಕೆ ಪ್ರವಾಸದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಲಂಡನ್ನಲ್ಲಿ ವಿಜಯ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ, ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ಭದ್ರತಾ ಕಾರಣಗಳಿಂದ ರದ್ದುಗೊಳಿಸಲಾಗಿದೆ.
ಲಂಡನ್ನ ಪ್ರತಿಷ್ಠಿತ ಶಾಂಗ್ರಿ-ಲಾ ದಿ ಶಾರ್ಡ್ ಹೋಟೆಲ್ನಲ್ಲಿ ಹೈಪ್ರೊಫೈಲ್ ಕಾರ್ಯಕ್ರಮವೊಂದರಲ್ಲಿ ವಿಜಯ್ ಭಾಗವಹಿಸಬೇಕಿತ್ತು. ಸೆಪ್ಟೆಂಬರ್ 15ರಂದು ಯುಕೆ ಸ್ಥಳೀಯ ಕಾಲಮಾನದ ಪ್ರಕಾರ ಕಾರ್ಯಕ್ರಮ ನಡೆಯಬೇಕಿದ್ದ ಹಿನ್ನೆಲೆಯಲ್ಲಿ, ವಿಜಯ್ ಅವರನ್ನು ನೋಡಲು ನೂರಾರು ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು.
ಗಂಟೆಗಟ್ಟಲೆ ಅಭಿಮಾನಿಗಳು ದಂಡು ದಂಡಾಗಿ ಕಾಯುತ್ತಿದ್ದರಿಂದ ಸ್ಥಳದಲ್ಲಿ ಭಾರಿ ಜನದಟ್ಟಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದ್ದು, ಅಗತ್ಯ ಅನುಮತಿಗಳ ವಿಚಾರದಲ್ಲೂ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಬಳಿಕ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಮಧ್ಯಪ್ರವೇಶಿಸಿ ಆಯೋಜಕರೊಂದಿಗೆ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು.
ಈ ಬಗ್ಗೆ ವಿಜಯ್ ತಂಡದ ಸದಸ್ಯರೊಬ್ಬರು ಧ್ವನಿವರ್ಧಕದ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಅಗತ್ಯ ಅನುಮತಿ ಲಭ್ಯವಾಗದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಿಂದ ವಿಜಯ್ ಅವರನ್ನು ನೋಡಲು ಗಂಟೆಗಟ್ಟಲೆ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಕುರಿತು ತಮಿಳುನಾಡಿನ ವಿಜಯ್ ಅವರ ಪಕ್ಷ ಟಿವಿಕೆ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಕಾರ್ಯಕ್ರಮ ರದ್ದಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಲಂಡನ್ ಮೆಟ್ರೋಪಾಲಿಟನ್ ಪೊಲೀಸರ ಮನವಿಯನ್ನು ಪರಿಗಣಿಸಿ, ವಿಜಯ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಯಾರೂ ಅವರನ್ನು ಭೇಟಿ ಮಾಡಲು ಪ್ರಯತ್ನಿಸಬಾರದು ಎಂದು ಪಕ್ಷ ಅಭಿಮಾನಿಗಳಲ್ಲಿ ಮನವಿ ಮಾಡಿದೆ.
ಇನ್ನು ಲಂಡನ್ನಲ್ಲಿ ವಿಜಯ್ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾರ್ಡ್ ಹಾಗೂ ಲಂಡನ್ ಬ್ರಿಡ್ಜ್ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವುದು ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ನೆಚ್ಚಿನ ನಾಯಕ ಹಾಗೂ ನಟ ವಿಜಯ್ ಅವರನ್ನು ಕಣ್ತುಂಬಿಕೊಳ್ಳಲು ಗಂಟೆಗಟ್ಟಲೆ ಕಾದಿದ್ದ ಅಭಿಮಾನಿಗಳು, ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾದ ಕಾರಣ ನಿರಾಸೆ ಅನುಭವಿಸಿದ್ದಾರೆ.



