ಮಂಡ್ಯ: ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮದ್ದೂರಿನ ಶಿವರಾಜ್ ಅವರ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಮದ್ದೂರು ನಗರದ ಕೊಲ್ಲಿ ವೃತ್ತದ ಬಳಿಯ ವಿನಾಯಕ ಬಡಾವಣೆಯಲ್ಲಿರುವ ಶಿವರಾಜ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಶಿವಪುರದಲ್ಲಿರುವ ಮನೆ ಹಾಗೂ ಅವಸರದಹಳ್ಳಿಯಲ್ಲಿರುವ ಫಾರ್ಮ್ ಹೌಸ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ.
ಶಿವರಾಜ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮನಹಳ್ಳಿ ಹಾಗೂ ಬೆಸಗರಹಳ್ಳಿ ಹಾಸ್ಟೆಲ್‌ಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಶಿವರಾಜ್ ಅವರು ನಿವೃತ್ತರಾಗಿದ್ದರು. ಇನ್ನು ದಾಳಿ ವೇಳೆ ಫಾರ್ಮ್ ಹೌಸ್‌ನಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಹಾಸ್ಟೆಲ್ ಮಕ್ಕಳಿಗೆ ನೀಡಬೇಕಿದ್ದ ಪುಸ್ತಕಗಳು ಹಾಗೂ ಬೆಡ್‌ಶೀಟ್‌ಗಳನ್ನು ಫಾರ್ಮ್ ಹೌಸ್‌ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಜೊತೆಗೆ ದುಬಾರಿ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿದ್ದು, ಫಾರ್ಮ್ ಹೌಸ್‌ನಲ್ಲಿ ಮಿನಿ ಬಾರ್ ನಿರ್ಮಿಸಿಕೊಂಡಿದ್ದ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಕೂಡ ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ಲೋಕಾಯುಕ್ತಕ್ಕೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಲೋಕಾಯುಕ್ತ ಪೊಲೀಸ್ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಅಧಿಕಾರಿಗಳು ದಾಖಲೆಗಳು ಹಾಗೂ ಆಸ್ತಿ ವಿವರಗಳ ಪರಿಶೀಲನೆ ಮುಂದುವರಿಸಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.



