ಗೌಟೆಂಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ನೈಋತ್ಯ ಭಾಗದಲ್ಲಿರುವ ವೆಸ್ಟ್ ರಾಂಡ್ ಪ್ರದೇಶದ ಬಾರ್ವೊಂದರಲ್ಲಿ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದೆ.
ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ 13 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ ತಿಳಿಸಿದೆ.
ಕೆಲವು ಶಂಕಿತರು ಎಕೆ-47 ರೈಫಲ್ಗಳು ಹಾಗೂ ಪಿಸ್ತೂಲ್ಗಳನ್ನು ಹಿಡಿದು ಬಾರ್ಗೆ ಬಂದಿದ್ದರು ಎನ್ನಲಾಗಿದೆ. ಮೊದಲು ಬಾರ್ನ ಹೊರಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಬಾರ್ನೊಳಗೆ ನುಗ್ಗಿ ಅಲ್ಲಿದ್ದವರ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ 15 ಮಂದಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದಾಳಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತರ ಪತ್ತೆಗಾಗಿ ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ (SAPS) ತನಿಖೆ ಆರಂಭಿಸಿದೆ. ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಎಂಟು ಮಂದಿಯನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.



