ನವದೆಹಲಿ: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ನಿರ್ಲಕ್ಷ್ಯ ವಹಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸುಪ್ರೀಂ ಕೋರ್ಟ್ (Supreme Court) ಸರ್ಕಾರಕ್ಕೆ ಹೊಸ ಹಾಗೂ ನವೀನ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಿದೆ. ಟ್ರಾಫಿಕ್ ಇ-ಚಲನ್ ದಂಡದ ಮೊತ್ತವನ್ನು ಪಾವತಿಸದಿದ್ದರೆ, ಅದನ್ನು ವಾಹನ ಮಾಲೀಕರ ವಿದ್ಯುತ್ ಬಿಲ್‌ಗೆ (Electricity Bill) ಲಿಂಕ್ ಮಾಡಿ ವಸೂಲಿ ಮಾಡುವಂತೆ ನ್ಯಾಯಪೀಠ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಕುರಿತು ವಿಚಾರಣೆ ನಡೆಸಿ, “ಕೇವಲ ಲಕ್ಷಾಂತರ ಇ-ಚಲನ್‌ಗಳನ್ನು ವಿತರಿಸಿದರೆ ಸಾಲದು, ವಿಧಿಸಲಾದ ದಂಡದ ಮೊತ್ತವನ್ನು ವಸೂಲಿ ಮಾಡುವುದು ಮುಖ್ಯವಾದ ಪ್ರಶ್ನೆಯಾಗಿದೆ. ದಂಡ ಪಾವತಿಸದಿದ್ದರೆ ಆ ಮೊತ್ತವನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸಿ. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದಲಾದರೂ ಜನರು ಬಿಲ್ ಪಾವತಿಸಲೇಬೇಕಾಗುತ್ತದೆ. ದೇಶದಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕು” ಎಂದು ಅಭಿಪ್ರಾಯಪಟ್ಟಿದೆ.
ದಂಡದ ಮೊತ್ತವನ್ನು ಪಾವತಿಸದ ವಾಹನಗಳನ್ನು ಕಪ್ಪುಪಟ್ಟಿಗೆ (Blacklist) ಸೇರಿಸಲು ಹಾಗೂ ಅಂತಹ ವಾಹನಗಳ ಮಾಲೀಕತ್ವ ವರ್ಗಾವಣೆಯನ್ನು (Vehicle Ownership Transfer) ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 45,000 ಕೋಟಿ ರೂಪಾಯಿ ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಾಗಿದೆ. ಇನ್ನು ಬರೋಬ್ಬರಿ 20,000 ಕೋಟಿ ರೂಪಾಯಿ ದಂಡದ ಮೊತ್ತ ವಸೂಲಿಯಾಗದೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಲಹೆ ನೀಡಿದೆ.



