ಮುಂಬೈ: ಪೊಲೀಸ್ ಠಾಣೆಯಲ್ಲೇ ಶಿವಸೇನೆಯ ಯುವ ನಾಯಕ ಸಿದ್ದೇಶ್ ಅಭಂಗೇ ಅವರ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ (ಸೆ.28) ಥಾಣೆಯ ಕೋಪ್ರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಸಿದ್ದೇಶ್ ಅಭಂಗೇ ಹಾಗೂ ಜವಳಿ ಉದ್ಯಮದಲ್ಲಿ ತೊಡಗಿರುವ ಕೆಲ ಮಹಿಳೆಯರ ನಡುವಿನ ಹಣಕಾಸಿನ ವಿವಾದವೇ ಗಲಾಟೆಗೆ ಕಾರಣ ಎನ್ನಲಾಗಿದೆ.
ಹಣಕಾಸಿನ ವಿವಾದವನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯರ ಗುಂಪು ಹಾಗೂ ಸಿದ್ದೇಶ್ ಅಭಂಗೇ ಕೋಪ್ರಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಸಂದರ್ಭದಲ್ಲಿ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸಹಚರನೊಂದಿಗೆ ಸೇರಿ ಅಭಂಗೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಠಾಣೆಯಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ಬಳಿಕ ಕೋಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಗಲಾಟೆಗೆ ನಿಖರ ಕಾರಣ ಹಾಗೂ ಹಲ್ಲೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



