HomeKarnataka Newsಫಲಿಸದ 5 ತಿಂಗಳ ಚಿಕಿತ್ಸೆ! ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು

ಫಲಿಸದ 5 ತಿಂಗಳ ಚಿಕಿತ್ಸೆ! ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು

For Dai;y Updates Join Our whatsapp Group

ಮಡಿಕೇರಿ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸುಮಾರು 19 ವರ್ಷದ ಗಂಡಾನೆಯೊಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಕಾದಾಟದಲ್ಲಿ ಗಾಯಗೊಂಡು ಮುರಿದ ದಂತದೊಂದಿಗೆ ಶಿಬಿರಕ್ಕೆ ಬಂದಿದ್ದ ಆನೆಗೆ ಅರಣ್ಯ ಇಲಾಖೆ ಕಳೆದ ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ ನೀಡುತ್ತಿತ್ತು. ತಜ್ಞ ವೈದ್ಯರ ತಂಡದಿಂದಲೂ ಆನೆಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಆನೆ ಮೃತಪಟ್ಟಿದೆ.

ಆನೆಯನ್ನು ಪ್ರತ್ಯೇಕವಾಗಿಟ್ಟು, ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ವಿಶೇಷ ಆರೈಕೆ ಮಾಡಲಾಗುತ್ತಿತ್ತು. ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕ ಔಷಧಿ, ಗಾಯಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

ಹೆಚ್ಚಿನ ತಜ್ಞ ಚಿಕಿತ್ಸೆಯ ಸಲುವಾಗಿ ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನೂ ಕರೆಸಿ ಜಂಟಿಯಾಗಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಡಿಜಿಟಲ್ ಎಕ್ಸ್‌ರೇ ಪರೀಕ್ಷೆ ನಡೆಸಿದಾಗ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ಪತ್ತೆಯಾಗಿತ್ತು.

ತಜ್ಞ ವೈದ್ಯರ ಸಲಹೆಯಂತೆ ಮುಂದುವರಿದ ಚಿಕಿತ್ಸೆಯ ಭಾಗವಾಗಿ ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆಪ್ಟೆಂಬರ್ 27ರಂದು ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ ಕೂಡ ಅಳವಡಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಸುಮಾರು 9.50ರ ವೇಳೆಗೆ ಆನೆ ಏಕಾಏಕಿ ಕುಸಿದು ಬಿದ್ದಿದೆ. ಕೂಡಲೇ ತುರ್ತು ಗ್ಲುಕೋಸ್ ಹಾಗೂ ಐವಿ ಚಿಕಿತ್ಸೆ ಸೇರಿದಂತೆ ತೀವ್ರ ನಿಗಾ ವಹಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಆನೆ ಕೊನೆಯುಸಿರೆಳೆದಿದೆ.

ಸದ್ಯ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದೀರ್ಘಕಾಲದ ಮೂಳೆ ಮುರಿತ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ.

ದುಬಾರೆ ಆನೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆಯ ಸಾವು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img