ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿರುವ ಹೊತ್ತಿನಲ್ಲಿ ದಸರಾ ರಜೆ ಸಮೀಪಿಸಿದೆ. ಆದರೆ ಶಿರಹಟ್ಟಿ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದ ನೀಡಬೇಕಾದ ಶೂ ಮತ್ತು ಸಾಕ್ಸ್‌ಗಳು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ. ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ತಾಲೂಕಿನ ೧೫೭ ಸರ್ಕಾರಿ ಶಾಲೆಗಳಲ್ಲಿ ೧೮,೩೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ೧೮,೩೧೦ ಜೋಡಿ ಶೂ–ಸಾಕ್ಸ್ ಪೂರೈಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸರಬರಾಜುದಾರರಿಗೆ ಇಂಡೆಂಟ್ ನೀಡಲಾಗಿದೆ. ಆದರೆ ಈವರೆಗೆ ೧೨,೦೭೬ ವಿದ್ಯಾರ್ಥಿಗಳಿಗೆ ಮಾತ್ರ ಶೂ–ಸಾಕ್ಸ್ ಪೂರೈಕೆಯಾಗಿದ್ದು, ಇನ್ನೂ ೬,೨೩೪ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿಲ್ಲ.
ಪೂರೈಕೆಯಾಗಿರುವ ಶೂ–ಸಾಕ್ಸ್‌ಗಳನ್ನು ಸಹ ವಿದ್ಯಾರ್ಥಿಗಳಿಗೆ ವಿತರಿಸಿಲ್ಲ. ಎಲ್ಲ ಅಳತೆಯ ಶೂ–ಸಾಕ್ಸ್‌ಗಳು ಬಂದಿಲ್ಲದಿರುವುದು ಹಾಗೂ ಬಂದಿರುವವುಗಳಲ್ಲಿಯೂ ವಿದ್ಯಾರ್ಥಿಗಳ ಅಳತೆಗೆ ಸಂಬಂಧಿಸಿದ ಗೊಂದಲವಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾದ ಬಳಿಕವೇ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸೌಲಭ್ಯ ಕೊಡುವ ಯೋಜನೆ… ತಲುಪಿಸುವಲ್ಲಿ ವಿಳಂಬ
ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶೂ–ಸಾಕ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಆದರೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಕ್ಕಳಿಗೆ ತಲುಪಬೇಕಾದ ಶೂ–ಸಾಕ್ಸ್‌ಗಳು ದಸರಾ ರಜೆ ಸಮೀಪಿಸಿದರೂ ಸಿಗದಿರುವುದು ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ನಮಗೆ ಶೂ–ಸಾಕ್ಸ್ ಯಾವಾಗ ಸಿಗುತ್ತದೆ?’ ಎಂದು ಪ್ರಶ್ನಿಸುತ್ತಿದ್ದಾರೆ. ಶಿರಹಟ್ಟಿ ಸಮೀಪದ ಹರಿಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಕಳೆದ ವರ್ಷ ಶೂ–ಸಾಕ್ಸ್ ವಿತರಿಸಿರಲಿಲ್ಲ. ಪ್ರಸಕ್ತ ವರ್ಷವೂ ವಿತರಣೆ ಆಗಿಲ್ಲ ಎನ್ನಲಾಗಿದೆ.
ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರ ಕಲ್ಪಿಸುವ ಸೌಲಭ್ಯಗಳು ಸಕಾಲದಲ್ಲಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಕೋಟ್
ತಾಲೂಕಿನಲ್ಲಿ ಎಲ್ಲ ಅಳತೆಯ ಶೂ–ಸಾಕ್ಸ್‌ಗಳು ಬಂದಿಲ್ಲ. ಈ ಕಾರಣದಿಂದ ಪೂರೈಕೆಯಾಗಿರುವ ಶೂ–ಸಾಕ್ಸ್‌ಗಳನ್ನು ವಿತರಿಸಿಲ್ಲ. ಈ ಕುರಿತು ಇಲಾಖೆಯ ಆಯುಕ್ತರು, ಉಪನಿರ್ದೇಶಕರು ಹಾಗೂ ಸರಬರಾಜುದಾರರಿಗೆ ಪತ್ರ ಬರೆಯಲಾಗಿದೆ.
— ಎಸ್.ವಿ. ಶೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ



