ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ಸಮೀಪದ ಜಕ್ಕಲಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಜಿಯೋ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಕರೆ ಹಾಗೂ ಇಂಟರ್‌ನೆಟ್ ಸೇವೆ ಪದೇಪದೆ ವ್ಯತ್ಯಯವಾಗುತ್ತಿರುವುದರಿಂದ ನೂರಾರು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.
ನೆಟ್‌ವರ್ಕ್‌ಗಾಗಿ ಗ್ರಾಹಕರು ಮೊಬೈಲ್ ಹಿಡಿದು ಮನೆಗಳಿಂದ ಹೊರಬಂದು ಎತ್ತರದ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಮೊಬೈಲ್‌ನಲ್ಲಿ ನೆಟ್‌ವರ್ಕ್ ಕಾಣಿಸಿಕೊಂಡರೂ ಕರೆ ಸಂಪರ್ಕವಾಗುವುದಿಲ್ಲ. ಸಂಪರ್ಕವಾದರೂ ಧ್ವನಿ ಸ್ಪಷ್ಟವಾಗಿ ಕೇಳಿಸದಿರುವುದು ಗ್ರಾಹಕರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿದೆ.
ಇಂಟರ್‌ನೆಟ್ ವೇಗವೂ ತೀರಾ ಕಡಿಮೆಯಾಗಿದ್ದು, ಆನ್‌ಲೈನ್ ವಹಿವಾಟು, ಡಿಜಿಟಲ್ ಪಾವತಿ, ಶಿಕ್ಷಣ ಹಾಗೂ ವಿವಿಧ ಅಗತ್ಯ ಸೇವೆಗಳಿಗೆ ಮೊಬೈಲ್ ಡೇಟಾ ಅವಲಂಬಿಸಿರುವ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ಹಲವರು ಪರದಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ಕರೆ ಮಾಡಲು ಸಾಧ್ಯವಾಗದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಬೇರೆ ನೆಟ್‌ವರ್ಕ್‌ಗೆ ಪೋರ್ಟ್
ಸಮಸ್ಯೆ ನಿರಂತರವಾಗಿರುವ ಹಿನ್ನೆಲೆಯಲ್ಲಿ ಜಿಯೋ ಗ್ರಾಹಕರಲ್ಲಿ ಹಲವರು ತಮ್ಮ ಮೊಬೈಲ್ ಸಂಖ್ಯೆಯನ್ನು ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸಮಸ್ಯೆ ಮುಂದುವರಿದರೆ ಇನ್ನಷ್ಟು ಗ್ರಾಹಕರು ಜಿಯೋ ಸೇವೆಯಿಂದ ದೂರವಾಗುವ ಸಾಧ್ಯತೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಯೋ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಜಕ್ಕಲಿ ಗ್ರಾಮದ ನೆಟ್‌ವರ್ಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಾಂತ್ರಿಕ ದೋಷವನ್ನು ಶೀಘ್ರ ಪತ್ತೆಹಚ್ಚಿ ಪರಿಹರಿಸಬೇಕು. ಗ್ರಾಮದಲ್ಲಿ ನಿರಂತರ ಹಾಗೂ ಗುಣಮಟ್ಟದ ಮೊಬೈಲ್ ಸೇವೆ ಒದಗಿಸುವ ಮೂಲಕ ಗ್ರಾಹಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



