ಲಕ್ಷ್ಮೇಶ್ವರ: ಸಾಲದ ಬಾಧೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದ ಹಿನ್ನೆಲೆಯಲ್ಲಿ ಮನನೊಂದು ಶಿರಹಟ್ಟಿ ತಾಲೂಕಿನ ಗುಡ್ಡದಪೂರ (ವರವಿ ತಾಂಡ) ಗ್ರಾಮದ ರೈತ ಜಗನಪ್ಪ ಡೂಗಪ್ಪ ಲಮಾಣಿ (50) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಗನಪ್ಪ ಅವರು ಪತ್ನಿಯ ಹೆಸರಿನಲ್ಲಿರುವ ಕುಂದ್ರಳ್ಳಿ ಗ್ರಾಮದ ಜಮೀನಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಸುಮಾರು ₹2 ಲಕ್ಷ ಸಾಲ ಪಡೆದು ಗೋವಿನಜೋಳ ಬಿತ್ತನೆ ಮಾಡಿದ್ದರು. ಇದರೊಂದಿಗೆ ಸುಮಾರು ಐದು ಎಕರೆ ಜಮೀನಿನ ಕೃಷಿ ಚಟುವಟಿಕೆಗಳಿಗಾಗಿ ಲಾವಣಿ ಹಾಗೂ ಕೈಗಡ ರೂಪದಲ್ಲಿ ₹6 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸುವ ಕುರಿತು ಆತಂಕಗೊಂಡಿದ್ದರು ಎನ್ನಲಾಗಿದೆ. ಸೆ. 27ರಂದು ಮಗಳ ಮನೆಗೆ ತೆರಳುವುದಾಗಿ ಕುಟುಂಬದವರಿಗೆ ತಿಳಿಸಿ ಮನೆಯಿಂದ ತೆರಳಿದ್ದ ಜಗನಪ್ಪ ಅವರು ಬಳಿಕ ಮೃತಪಟ್ಟಿರುವುದು ತಿಳಿದುಬಂದಿದೆ.
ಘಟನೆ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



