ಬೀದರ್: ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಹಾಗೂ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ ಎಂದು ವರದಿಯಾಗಿದೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಅಕ್ಟೋಬರ್ 1ರಂದು ಎನ್‌ಐಎ ತಂಡ ಕಾರ್ಯಾಚರಣೆ ನಡೆಸಿ ವಿಶಾಲ್ ಮೇತ್ರೆಯನ್ನು ಬಂಧಿಸಿದೆ ಎನ್ನಲಾಗಿದೆ. ಯುಎಪಿಎ (UAPA) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಲಾರೆನ್ಸ್ ಗ್ಯಾಂಗ್‌ನಿಂದ ಹೊರಬಂದು ಶಹಜಾದ್ ಭಟ್ಟಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಆತನೊಂದಿಗೆ ವಿಶಾಲ್ ಮೇತ್ರೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆಯ ಆಧಾರದ ಮೇಲೆ ಎನ್‌ಐಎ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಬಂಧಿತ ವಿಶಾಲ್ ಮೇತ್ರೆಗೆ ಈ ಹಿಂದೆ ಅಪರಾಧ ಹಿನ್ನೆಲೆ ಇದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ತನಿಖೆ ಮತ್ತು ಕಾನೂನು ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸದ್ಯ ಕೋರ್ಟ್ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ.
ವಿಶಾಲ್ ಮೇತ್ರೆ ವಿರುದ್ಧದ ಆರೋಪಗಳು ಹಾಗೂ ಶಹಜಾದ್ ಭಟ್ಟಿಯೊಂದಿಗಿನ ಸಂಪರ್ಕದ ಬಗ್ಗೆ ಎನ್‌ಐಎ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.



