ಬೆಂಗಳೂರು: ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿಯೊಬ್ಬರು ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ನಡೆದಿದೆ. ಆಂಧ್ರ ಪ್ರದೇಶ ಮೂಲದ 30 ವರ್ಷದ ವಿನಯ್ ನಾಪತ್ತೆಯಾಗಿರುವ ಟೆಕ್ಕಿ.
ವಿನಯ್ ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ವಾಸವಿದ್ದು, ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು ಎನ್ನಲಾಗಿದೆ. ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಲು ಯೋಜನೆ ರೂಪಿಸಿದ್ದ ಅವರು, ‘ಬಿಎಲ್‌ಆರ್ ಹೈಕ್’ ಎಂಬ ಇನ್‌ಸ್ಟಾಗ್ರಾಂ ಗ್ರೂಪ್ ಮೂಲಕ ಆಯೋಜಿಸಲಾಗಿದ್ದ ಟ್ರೆಕ್ಕಿಂಗ್‌ನಲ್ಲಿ ಎಂಟು ಜನರ ತಂಡದೊಂದಿಗೆ ಭಾಗವಹಿಸಿದ್ದರು.
ಈಜಲು ತೆರಳಿದ್ದ ವೇಳೆ ದುರ್ಘಟನೆ
ಟ್ರೆಕ್ಕಿಂಗ್ ಮುಗಿಸಿದ ಬಳಿಕ ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ ತಂಡದ ಸದಸ್ಯರು ಕಲ್ಲು ಕ್ವಾರಿಯಲ್ಲಿದ್ದ ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜುತ್ತಿದ್ದ ವಿನಯ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ವಿನಯ್ ನೀರಿನಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಉಳಿದ ತಂಡದ ಸದಸ್ಯರು ನೀರಿನಿಂದ ಹೊರಬಂದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೂ ಮಾಹಿತಿ ನೀಡಲಾಗಿದ್ದು, ತಂಡವು ಸ್ಥಳಕ್ಕೆ ಆಗಮಿಸಿ ವಿನಯ್‌ಗಾಗಿ ಶೋಧಕಾರ್ಯ ಆರಂಭಿಸಿದೆ.
ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಸಂಜೆದಿಂದಲೇ ಕ್ವಾರಿ ನೀರಿನಲ್ಲಿ ವಿನಯ್‌ಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಸದ್ಯದವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇತ್ತ ವಿನಯ್ ನಾಪತ್ತೆಯಾಗಿರುವ ಸುದ್ದಿ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಟೆಕ್ಕಿ ವಿನಯ್‌ಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.



