ಬೆಳಗಾವಿ: ಗಾಳಿಪಟ ಹಾರಿಸುವ ಸಂಭ್ರಮ ಬೆಳಗಾವಿ ನಗರದಲ್ಲಿ ಕಣ್ಣೀರಿನ ಮಡುವಿನಲ್ಲಿ ಕೊನೆಯಾಗಿದ್ದು, ಕೇವಲ ಎರಡೇ ದಿನಗಳ ಅಂತರದಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಪ್ರತ್ಯೇಕ ದುರ್ಘಟನೆಗಳಿಗೆ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಗಾಂಧೀನಗರ ಬಳಿ ಹರಿತವಾದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ದ್ವಿಚಕ್ರ ವಾಹನ ಸವಾರರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಾಂಜಾ ದಾರಕ್ಕೆ ಬಲಿಯಾದ ಯುವಕನನ್ನು ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ಅವರು ಬೈಕ್‌ನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಗಾಂಧೀನಗರದ ಬಳಿ ಏಕಾಏಕಿ ಹರಿತವಾದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ.
ದಾರದಿಂದ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಧ್ರುವ ಅವರನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಉತ್ತರ ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ನಡೆದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಂಧೀನಗರ ಪ್ರದೇಶವು ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



