ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ ಕುಟುಂಬದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಿಯತಮೆಯನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ನಾಪತ್ತೆಯಾಗಿದ್ದಾನೆ ಎಂಬ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ.
ಕಳೆದ ಐದು ತಿಂಗಳಿನಿಂದ ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಯುವತಿ, ಪ್ರಿಯಕರನಿಗಾಗಿ ಕಾಯುತ್ತಿದ್ದು, ಆತ ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾಳೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದು, ಕಳೆದ ಐದು ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದರು. ಈ ವಿಚಾರವನ್ನು ಸೂರ್ಯ ತನ್ನ ಪೋಷಕರಿಗೂ ತಿಳಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ ಮದುವೆಗೆ ಸೂರ್ಯನ ಪೋಷಕರು ಒಪ್ಪಿಗೆ ಸೂಚಿಸಿದ್ದರು ಎಂದು ಯುವತಿ ತಿಳಿಸಿದ್ದಾಳೆ.
ಆದರೆ, ಯುವತಿಯ ತಾಯಿ ಮದುವೆಗೆ ವಿರೋಧ ವ್ಯಕ್ತಪಡಿಸಿ, ಮಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು ಎನ್ನಲಾಗಿದೆ. ಇದೇ ವೇಳೆ ಸೂರ್ಯನ ಸ್ನೇಹಿತ ಪ್ರವೀಣ್ ತನ್ನ ಬಗ್ಗೆ ಸೂರ್ಯನ ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಅವರು ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಸೆಪ್ಟೆಂಬರ್ 24ರಂದು ಮೊಬೈಲ್ ಫೋನ್ ಬಿಟ್ಟು ಸೂರ್ಯ ನಾಪತ್ತೆಯಾಗಿದ್ದಾನೆ. ಈ ಕುರಿತು ಆತನ ಪೋಷಕರನ್ನು ವಿಚಾರಿಸಿದಾಗ, ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವುದರ ಜೊತೆಗೆ ಪದೇಪದೇ ಕರೆ ಮಾಡಿದರೆ ಸರಿಯಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂಬುದು ಯುವತಿಯ ಆರೋಪ. ಅಲ್ಲದೆ, ತನ್ನ ವಿರುದ್ಧವೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಈ ಘಟನೆಗಳಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಕಳೆದ 15 ದಿನಗಳಿಂದ ಊಟ, ನಿದ್ದೆ ಇಲ್ಲದೆ ಮಾನಸಿಕವಾಗಿ ನೊಂದಿದ್ದೇನೆ ಎಂದು ಕಣ್ಣೀರಿಟ್ಟಿರುವ ಯುವತಿ, ಮುಂಬರುವ ಗುರುವಾರದವರೆಗೆ ಸೂರ್ಯನಿಗಾಗಿ ಕಾಯುವುದಾಗಿ ತಿಳಿಸಿದ್ದಾಳೆ.
ಅಷ್ಟರೊಳಗೆ ಸೂರ್ಯ ಬಂದು ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿರುವ ಯುವತಿ, ತನ್ನ ಸಾವಿಗೆ ಸೂರ್ಯ, ಆತನ ಪೋಷಕರು ಹಾಗೂ ಪ್ರವೀಣ್ ಕಾರಣರಾಗುತ್ತಾರೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.



