ಬೆಳಗಾವಿ: ಕಿತ್ತೂರು ಉತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿಯಾಗಿರುವ ಘಟನೆ ನಡೆದಿದೆ.
ಮೂರ್ತಿಯ ಖಡ್ಗ ಹಿಡಿದ ಕೈ ತುಂಡಾಗಿ ಕೆಳಗೆ ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೂರ್ತಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರ ಅಚಾತುರ್ಯದಿಂದ ಕೈ ತುಂಡಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಂಡಿದ್ದು, ಮೂರ್ತಿಯನ್ನು ಕೇಸರಿ ಬಟ್ಟೆಯಿಂದ ಮುಚ್ಚಿದೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ವೀರಪ್ಪ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಿತ್ತೂರು ಠಾಣೆಯ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಇನ್ನು, ಎರಡು ದಿನಗಳ ಹಿಂದಷ್ಟೇ ಇದೇ ವೃತ್ತದಲ್ಲಿ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಕಿತ್ತೂರು ಉತ್ಸವದ ಸಂದರ್ಭದಲ್ಲೇ ಮೂರ್ತಿಗೆ ಹಾನಿಯಾಗಿರುವುದು ಗಮನ ಸೆಳೆದಿದೆ.



