HomeKarnataka Newsರಾಜ್ಯದಲ್ಲಿ ಹಿಂಗಾರು ಬೆಳೆ ಸಮೃದ್ಧವಾಗಲಿದೆ, ಜನರಿಗೆ ನೆಮ್ಮದಿ ಸಿಗಲಿದೆ: ಭವಿಷ್ಯ ನುಡಿದ ಕೋಡಿ ಶ್ರೀ

ರಾಜ್ಯದಲ್ಲಿ ಹಿಂಗಾರು ಬೆಳೆ ಸಮೃದ್ಧವಾಗಲಿದೆ, ಜನರಿಗೆ ನೆಮ್ಮದಿ ಸಿಗಲಿದೆ: ಭವಿಷ್ಯ ನುಡಿದ ಕೋಡಿ ಶ್ರೀ

For Dai;y Updates Join Our whatsapp Group

ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆಯ ಏರುಪೇರು ಹಾಗೂ ಬೆಳೆಗಳ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಿಂಗಾರು ಮಳೆ ಮತ್ತು ಕೃಷಿ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದ್ದು, ಬೆಳೆಗಳು ಸಮೃದ್ಧವಾಗಲಿವೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ದೊರೆಯಲಿದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠ ಶ್ರೀಗಳು, ಈ ಹಿಂದೆ ತಾವು ನುಡಿದಿದ್ದ ಭವಿಷ್ಯವಾಣಿಯನ್ನು ನೆನಪಿಸಿಕೊಂಡರು. ಮುಂಗಾರು ಮಳೆ ಸರಿಯಾಗಿ ಆಗುವುದಿಲ್ಲ, ನೀರಿನ ಕೊರತೆ ಉಂಟಾಗುತ್ತದೆ, ಅನ್ನಕ್ಕೂ ಸಂಕಷ್ಟ ಎದುರಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಆ ಪರಿಸ್ಥಿತಿಗಳು ಕಂಡುಬಂದಿವೆ ಎಂದು ತಿಳಿಸಿದರು.

ಆದರೆ ಈ ಬಾರಿ ಹಿಂಗಾರು ಮಳೆಯ ಕುರಿತು ಆಶಾದಾಯಕ ಭವಿಷ್ಯ ನುಡಿದಿರುವ ಸ್ವಾಮೀಜಿ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ. ಹಿಂಗಾರು ಬೆಳೆಗಳು ಸಮೃದ್ಧವಾಗಲಿದ್ದು, ಜನಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ಜಲಚರಗಳಿಗೂ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇದೇ ವೇಳೆ ಅಖಂಡ ಕರ್ನಾಟಕದ ಏಕತೆ ಹಾಗೂ ನಾಡಿನ ಸಂಸ್ಕೃತಿಯ ಮಹತ್ವದ ಬಗ್ಗೆಯೂ ಶ್ರೀಗಳು ಮಾತನಾಡಿದರು. ಕರ್ನಾಟಕ ಒಂದಾಗಿ ಮುಂದುವರಿಯಬೇಕಾದರೆ ಸಾಹಿತ್ಯ, ಸಂಸ್ಕೃತಿ, ಜನಜೀವನ ಹಾಗೂ ಕೃಷಿ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ರಾಜ್ಯದ ಎಲ್ಲ ಭಾಗಗಳಲ್ಲಿಯೂ ಮಳೆ ಮತ್ತು ಬೆಳೆ ಚೆನ್ನಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಧಾರವಾಡದಲ್ಲಿ ನಡೆಯುತ್ತಿರುವ ಜಂಬೂಸವಾರಿ ಕುರಿತು ಮಾತನಾಡಿದ ಅವರು, ಈ ಕಾರ್ಯಕ್ರಮ ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು. ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಹಾಗೂ ಉತ್ತರ ಕರ್ನಾಟಕದ ಧಾರವಾಡದಲ್ಲಿ ನಡೆಯುವ ಜಂಬೂಸವಾರಿ ನಾಡಿನ ಜನರಲ್ಲಿ ಏಕತೆಯ ಮನೋಭಾವ ಮೂಡಿಸುತ್ತವೆ ಎಂದು ತಿಳಿಸಿದರು.

ದಸರಾ ಹಬ್ಬವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗಿಲ್ಲ. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಆದರ್ಶಗಳು, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹಬ್ಬವಾಗಿದೆ. ಮನುಷ್ಯ ಉತ್ತಮ ಜೀವನ ನಡೆಸಬೇಕಾದರೆ ಹಿರಿಯರ ಆದರ್ಶಗಳನ್ನು ಪಾಲಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಇನ್ನು ರಾಜ್ಯ ರಾಜಕಾರಣದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೋಡಿಮಠ ಶ್ರೀಗಳು ನೇರ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿದರು. ‘ರಾಜಕಾರಣದ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರ ಮೇಲೂ ದೈವಕೃಪೆ ಇರಲಿ’ ಎಂದು ಉತ್ತರಿಸಿದರು.

ನಮಗೆ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನರ ನೆಮ್ಮದಿ. ರೋಗರುಜಿನಗಳು ದೂರವಾಗಿ ಎಲ್ಲರೂ ಶಾಂತಿ ಮತ್ತು ಸಂತೋಷದಿಂದ ಬದುಕಬೇಕು ಎಂಬುದೇ ನಮ್ಮ ಆಶಯ ಎಂದು ಸ್ವಾಮೀಜಿ ಹೇಳಿದರು.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img