ಬೆಂಗಳೂರು: ತಾಯಿ ಜೊತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಏಕಾಏಕಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಟೆಕ್ಕಿ ಯುವತಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಶ್ವೇತಾ (25) ಮೃತಳಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಏಪ್ರಿಲ್ 25ರಂದು ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯೊಂದಿಗೆ ಮಾತನಾಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು, ಮಾತನಾಡಲಾರದ ಸ್ಥಿತಿಗೆ ತಲುಪಿದ್ದಳು. ತಕ್ಷಣವೇ ಬೆಂಗಳೂರಿಗೆ ಚಿಕಿತ್ಸೆಗೆ ಕರೆತರಲಾಗುತ್ತಿದ್ದಾಗಲೇ ಆಕೆ ಕೋಮಾಗೆ ಜಾರಿದ್ದಳು.
ವೈದ್ಯಕೀಯ ಪರೀಕ್ಷೆಯಲ್ಲಿ ಶ್ವೇತಾಳಿಗೆ ಬ್ರೈನ್ ಸ್ಟ್ರೋಕ್ ಆಗಿರುವುದು ದೃಢಪಟ್ಟಿದ್ದು, ಆಕೆಯ ಸ್ಥಿತಿ ಗಂಭೀರವಾಗಿತ್ತು. ದುಃಖದ ನಡುವೆಯೇ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಶ್ವೇತಾ ಮೃತಪಟ್ಟಿದ್ದು, ಅಂಗಾಂಗ ದಾನ ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಏಕೈಕ ಪುತ್ರಿಯನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.
ಸದ್ಯ ಶ್ವೇತಾಳ ಮೃತದೇಹವನ್ನು ಹಾಸನಕ್ಕೆ ರವಾನಿಸಲಾಗಿದೆ. ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆತಂಕ ವ್ಯಕ್ತವಾಗಿದ್ದರೆ, ಯಾವುದೇ ಪೂರ್ವ ಲಕ್ಷಣಗಳಿಲ್ಲದೇ ಆರೋಗ್ಯವಾಗಿದ್ದ ಯುವತಿ ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ.



