ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವೈಯಕ್ತಿಕ ಬದುಕಿನ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಪ್ರೇಯಸಿ ಗೌರಿ ಸ್ಪ್ರ್ಯಾಟ್ ಜೊತೆ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಜುಲೈ 5ರಂದು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಮೀರ್ ಖಾನ್ ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ದಿನವೇ ಗೌರಿ ಅವರನ್ನು ಅಧಿಕೃತವಾಗಿ ಪರಿಚಯಿಸಿ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದರು. ಹಲವು ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದ್ದು, ಇದೀಗ ಇಬ್ಬರೂ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಆಮೀರ್ ಖಾನ್ ಈಗಾಗಲೇ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರೊಂದಿಗೆ 16 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದ ಅವರು, 2021ರಲ್ಲಿ ಬೇರ್ಪಟ್ಟಿದ್ದರು.
ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ಫ್ಯಾಶನ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಉದ್ಯಮಿಯಾಗಿದ್ದಾರೆ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು, ಮುಂಬೈನಲ್ಲಿ ಯಶಸ್ವಿಯಾಗಿ ಸಲೂನ್ ವ್ಯವಹಾರ ನಡೆಸುತ್ತಿದ್ದಾರೆ.
ಸಂಬಂಧವನ್ನು ಬಹಿರಂಗಪಡಿಸಿದ ಬಳಿಕ ಆಮೀರ್ ಖಾನ್, ‘ಗೌರಿ ನನ್ನ ಜೀವನಕ್ಕೆ ಬಂದ ಬಳಿಕ ನಾನು ಹೆಚ್ಚು ಸಂತೋಷವಾಗಿದ್ದೇನೆ. ಜೀವನದಲ್ಲಿ ಮತ್ತೊಮ್ಮೆ ಸಮತೋಲನ ಮತ್ತು ನೆಮ್ಮದಿ ಸಿಕ್ಕಿದೆ’ ಎಂದು ಹೇಳಿಕೊಂಡಿದ್ದರು.
ಈಗ ಅವರ ವಿವಾಹದ ಸುದ್ದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಬಾಲಿವುಡ್ ವಲಯದಲ್ಲಿ ಭಾರಿ ಕುತೂಹಲ ಮೂಡಿದ್ದು, ಅಧಿಕೃತ ಘೋಷಣೆಯ ನಿರೀಕ್ಷೆ ಹೆಚ್ಚಾಗಿದೆ.



