ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಪ್ರದೇಶದಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿದು ಬಿದ್ದ ಪರಿಣಾಮ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಪಲ್ಲಕ್ಕಿಯಲ್ಲಿ ಕೊಂಡೊಯ್ಯುವ ವೇಳೆ ಈ ಅವಘಡ ಸಂಭವಿಸಿದೆ. ಕೊಂಬು, ಕಹಳೆ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕಾಲು ಸಂಕದ ಮೇಲೆ ಬಂದಾಗ ಅದು ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಪಲ್ಲಕ್ಕಿ ಉರುಳಿ ಬಿದ್ದು ಗಾಯಗಳಾಗಿವೆ.
ಘಟನೆಯಲ್ಲಿ ಸುನಿಲ್ ಶೆಟ್ಟಿ (ಮುಕಾಲ್ದಿ ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರನ್ನೂ ಒಳಗೊಂಡು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಸಂಕ ಮುರಿದು ಕಲ್ಲಿನ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ ಗಾಯಗಳಾಗಿವೆ.
ಅವಘಡದಲ್ಲಿ ಪಲ್ಲಕ್ಕಿಯಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರೆ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



