ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ಪ್ರಭಾರ ಹಂಚಿಕೆ, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸಮಗ್ರ ತನಿಖೆ ನಡೆಸುವಂತೆ ಮುಸ್ಲಿಂ ಸಮಾಜದ ಯುವಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಇಮಾಮಸಾಬ ಡಂಬಳ ಮಾತನಾಡಿ, ಉಚ್ಚ ನ್ಯಾಯಾಲಯ ಹಾಗೂ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹೆಚ್ಚುವರಿ ಹುದ್ದೆಗಳ ಪ್ರಭಾರ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಒಬ್ಬೊಬ್ಬ ಸಿಬ್ಬಂದಿಗೆ ನಾಲ್ಕೈದು ಹುದ್ದೆಗಳ ಹೆಚ್ಚುವರಿ ಜವಾಬ್ದಾರಿ ನೀಡಿರುವುದರಿಂದ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಸಾರ್ವಜನಿಕರು ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟದ ಆಹಾರದ ಕೊರತೆಯಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿಯೂ ನಿಯಮಬಾಹಿರತೆ ನಡೆದಿದೆ ಎಂದು ಆರೋಪಿಸಿದರು. ಇಲಾಖೆಯಲ್ಲಿನ ಎಲ್ಲ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜೇಸಾಬ ಶಿರಹಟ್ಟಿ, ಅಮನ್ ಬೋದ್ಲೆಖಾನ, ಆಸೀಫ್ ಯಲಿಗಾರ, ಗೌಸಮೋದಿನ್ ಸೂಡಿ, ಜೈಲಾನಿ ಶಿರಹಟ್ಟಿ, ಇರ್ಷಾದಅಹ್ಮದ ದಂಡಿನ, ಜಾಕೀರಹುಸೇನ ಮಾಲ್ದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ನ್ಯಾಯ ದೊರೆಯಬೇಕಾದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಇಮಾಮಸಾಬ ಡಂಬಳ, ಸಾಮಾಜಿಕ ಕಾರ್ಯಕರ್ತ



