ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳತೆ, ಸಜ್ಜನಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವದ ನಾಗೇಶ್ ಅವರು ವೈಚಾರಿಕ ಬದ್ಧತೆ ಮತ್ತು ಜನಪರ ಕಾಳಜಿಗೆ ಹೆಸರಾಗಿದ್ದರು ಎಂದು ಜೋಶಿ ಸ್ಮರಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಪೂರ್ಣಾವಧಿ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ್ದ ಬಿ.ಸಿ. ನಾಗೇಶ್, ಬಳಿಕ ಶಾಸಕರಾಗಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ಜಾರಿಗೆ ತಂದ ಹಲವು ಸುಧಾರಣೆಗಳು ಹಾಗೂ ಸಂಘಟನಾ ಕೌಶಲ್ಯ ಸದಾ ಸ್ಮರಣೀಯ ಎಂದು ಜೋಶಿ ಹೇಳಿದ್ದಾರೆ.
ತಿಪಟೂರು ಹಾಗೂ ತುಮಕೂರು ಭಾಗದ ಶಿಕ್ಷಣ ಮತ್ತು ಅಭಿವೃದ್ಧಿಗೆ ನಾಗೇಶ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಬಿಜೆಪಿ ಸಂಘಟನೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.
ಸರಳತೆ ಮತ್ತು ಸೌಜನ್ಯಕ್ಕೆ ಹೆಸರಾಗಿದ್ದ ನಾಗೇಶ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಜೋಶಿ ಪ್ರಾರ್ಥಿಸಿದ್ದಾರೆ.



