HomeGadag Newsಅಂಜಲಿ ಕೊಲೆಗೆ ಪೊಲೀಸರೇ ಕಾರಣ : ಬಸವರಾಜ ಬೊಮ್ಮಾಯಿ

ಅಂಜಲಿ ಕೊಲೆಗೆ ಪೊಲೀಸರೇ ಕಾರಣ : ಬಸವರಾಜ ಬೊಮ್ಮಾಯಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಂಜಲಿ ಕೊಲೆ ಬೆದರಿಕೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದುಗಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾಳ ಮಾದರಿಯಲ್ಲಿಯೇ ಕೊಲೆ ಮಾಡುವುದಾಗಿ ಆರೋಪಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರನ್ನೂ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಈ ಕೊಲೆಯನ್ನು ತಪ್ಪಿಸಬಹುದಿತ್ತು. ಈ ಕೊಲೆಗೆ ಪರೋಕ್ಷವಾಗಿ ಪೊಲೀಸರು ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಪೊಲೀಸರು ಇಸ್ಪೀಟು, ಮಟಕಾ, ಕ್ಲಬ್, ಮರಳು ವ್ಯವಹಾರಗಳ ದಂಧೆಯಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಹಾಗೂ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ರಾಜ್ಯದಲ್ಲಿ ಗೂಂಡಾಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನರ, ಹೆಣ್ಣುಮಕ್ಕಳ ಪ್ರಾಣಕ್ಕೂ ಸುರಕ್ಷತೆ ಇಲ್ಲ. ರಾಜ್ಯದಲ್ಲಿ ಭಯದ ವಾತಾವರಣ, ಗೂಂಡಾ ವಾತಾವರಣವಿದೆ. ನೇಹಾ ಪ್ರಕರಣದಲ್ಲಿ ನಾವು ರಾಜಕೀಯ ಮಾಡಿಲ್ಲ. ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ಕೊಲೆ ಆದರೆ ಸುಮ್ಮನೆ ಕುಳಿತುಕೊಳ್ಳಬೇಕಾ, ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂರುತ್ತಿದ್ದರಾ ಎಂದು ಪ್ರಶ್ನಿಸಿದರು.

ಒಂದು ಕಡೆ ಸಾವಿರ ವಿದ್ಯಾರ್ಥಿಗಳ ಮಧ್ಯೆ ನೇಹಾ ಕೊಲೆ ಆಗುತ್ತಾಳೆ. ಮತ್ತೊಂದು ಕಡೆ ಅಂಜಲಿ ಮನೆ ಹೊಕ್ಕು ಕೊಲೆ ಮಾಡುತ್ತಾರೆ ಅಂದರೆ, ಇದು ಗೂಂಡಾ ರಾಜ್ಯ ಅಲ್ಲದೆ ಇನ್ನೇನು? ಇಷ್ಟೆಲ್ಲಾ ಆದರೂ ಸಿಎಂ ಹಾಗೂ ಗೃಹ ಸಚಿವರು ಏನು ಆಗಿಲ್ಲ ಎನ್ನುವ ರೀತಿಯಲ್ಲಿದ್ದಾರೆ. ಇದರ ಬಗ್ಗೆ ಸಣ್ಣ ಪರಿಶೀಲನೆ ಸಹ ಮಾಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಪ ಸದಸ್ಯ ಎಸ್.ವಿ ಸಂಕನೂರ, ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ವಕ್ತಾರ ಎಂ.ಎಂ. ಹಿರೇಮಠ ಇದ್ದರು.

ನೇಹಾ ಕೊಲೆ ಆದಾಗ ಬರಲಿಲ್ಲ, ತನಿಖೆ ಚುರುಕುಗೊಳಿಸಲಿಲ್ಲ. ಅಂಜಲಿ ಕೊಲೆ ಆದಾಗಲೂ ಉದಾಸೀನ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆದರೂ ತಿರುಗಿ ನೋಡಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ದಲಿತ ಮಹಿಳೆಯನ್ನು ವಿವಸ್ತçಗೊಳಿಸಿದರೂ ನೋಡಲಲಿಲ್ಲ.

ಕಾಂಗ್ರೆಸ್ ಸರ್ಕಾರ ಯಾರ ಪರವಾಗಿದೆ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಗೃಹ ಸಚಿವರನ್ನುದ್ದೇಶಿಸಿ ಬಸವರಾಜ ಬೊಮ್ಮಾಯಿ ಪ್ರಶ್ನೆಗಳ ಸುರಿಮಳೆಗೈದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img