ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಅವರ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅಂಗೀಕರಿಸಿದ್ದು, ಈ ಮೂಲಕ ಬಿಜೆಪಿಯೊಂದಿಗಿನ ಸುಮಾರು ಆರು ವರ್ಷಗಳ ರಾಜಕೀಯ ನಂಟಿಗೆ ತೆರೆ ಬಿದ್ದಿದೆ ಎನ್ನಲಾಗಿದೆ.
ಜೂನ್ 2ರಂದು ಅಣ್ಣಾಮಲೈ ಅವರು ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಬಳಿಕ ಅವರು ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.
ಆದರೆ ರಾಜೀನಾಮೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಆ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಣ್ಣಾಮಲೈ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಎಐಎಡಿಎಂಕೆಯನ್ನು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಂಡ ಬಳಿಕ ಪಕ್ಷದ ಉನ್ನತ ನಾಯಕತ್ವ ಅಣ್ಣಾಮಲೈ ಅವರನ್ನು ಕಡೆಗಣಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಪಕ್ಷದ ಕೆಲವು ನಿರ್ಧಾರಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗುತ್ತಿದೆ. ಈ ಹಿಂದೆ ತಮಿಳುನಾಡು ವಿಧಾನಸಭೆ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗಳಿಗೆ ಸಹ ಅವರು ರಾಜೀನಾಮೆ ನೀಡಿದ್ದರು.
ಇದರ ನಡುವೆ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ತಮಿಳುನಾಡಿನಲ್ಲಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಹೆಸರಿನ ಹೊಸ ಜನಪರ ಸಂಘಟನೆ ಅಥವಾ ಚಳವಳಿಯನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅವರು ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ಅಣ್ಣಾಮಲೈ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬೆಳವಣಿಗೆಯ ನಂತರ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳ ಕುರಿತು ಚರ್ಚೆಗಳು ಜೋರಾಗಿದ್ದವು.
ಇದೀಗ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಪೋಸ್ಟರ್‌ಗಳು ಅವರ ಮುಂದಿನ ರಾಜಕೀಯ ಹೆಜ್ಜೆಯ ಸುಳಿವು ನೀಡುತ್ತಿವೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿಯ ಸಂಘಟನೆ ಬಲವರ್ಧನೆಗೆ ಪ್ರಮುಖ ಪಾತ್ರವಹಿಸಿದ್ದರು. ಆದರೆ ವಿಧಾನಸಭೆ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡ ವಿಚಾರವೂ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ಚುನಾವಣಾ ಪ್ರಚಾರದಲ್ಲಿ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗಲಿಲ್ಲ ಎಂಬ ಚರ್ಚೆಗಳೂ ನಡೆದಿದ್ದವು. ಜೊತೆಗೆ ಸತತವಾಗಿ ಎರಡು ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗಿದ್ದುದೂ ಅವರ ರಾಜಕೀಯ ಭವಿಷ್ಯದ ಕುರಿತು ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿತ್ತು.



