ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ-2ಗೆ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.
ಪರೀಕ್ಷೆ-1ರಲ್ಲಿ ಒಟ್ಟು 45,415 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ವಿಷಯವಾರು ಅಂಕಿಅಂಶಗಳನ್ನು ಸಚಿವರು ಪ್ರಕಟಿಸಿದ್ದಾರೆ. ಒಂದು ವಿಷಯದಲ್ಲಿ 20,691 ವಿದ್ಯಾರ್ಥಿಗಳು, ಎರಡು ವಿಷಯಗಳಲ್ಲಿ 10,509 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 6,103 ವಿದ್ಯಾರ್ಥಿಗಳು, ನಾಲ್ಕು ವಿಷಯಗಳಲ್ಲಿ 3,799 ವಿದ್ಯಾರ್ಥಿಗಳು, ಐದು ವಿಷಯಗಳಲ್ಲಿ 2,552 ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಷಯಗಳಲ್ಲಿ 1,716 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಪರೀಕ್ಷೆಯ ಫಲಿತಾಂಶದಿಂದಾಗಿ ಯಾರೂ ನಿರಾಶೆಗೊಂಡು ಶಿಕ್ಷಣವನ್ನು ಮಧ್ಯದಲ್ಲಿ ಬಿಡಬಾರದು ಎಂದು ಸಚಿವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಮುಂಬರುವ ‘ಪರೀಕ್ಷೆ-2’ಗೆ ಕಡ್ಡಾಯವಾಗಿ ನೋಂದಾಯಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಶೈಕ್ಷಣಿಕ ಸಿದ್ಧತೆ ಒದಗಿಸಲು ಇಲಾಖೆಯ ಉಪ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.



