ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸಂಪುಟ ಸಚಿವರೊಂದಿಗೆ ಬುಧವಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾದ ಶರ್ಮಾ, ತಮ್ಮ ಸಚಿವ ಸಂಪುಟದ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು.
ರಾಜ್ಯಪಾಲರು ಹಿಮಂತ ಬಿಸ್ವಾ ಶರ್ಮಾ ಹಾಗೂ ಸಚಿವ ಸಂಪುಟದ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅಸ್ಸಾಂ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಹಿಮಂತ ಬಿಸ್ವಾ ಶರ್ಮಾಗೆ ಸೂಚನೆ ನೀಡಿದ್ದಾರೆ ಎಂದು ಲೋಕಭವನದಿಂದ ಪ್ರಕಟಣೆ ಹೊರಡಿಸಲಾಗಿದೆ.
ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಮೇ 12ರಂದು ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಬಿಜೆಪಿ ಮೂಲಗಳ ಪ್ರಕಾರ, ಹಿಮಂತ ಬಿಸ್ವಾ ಶರ್ಮಾ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚು ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹಿಮಂತ ಬಿಸ್ವಾ ಶರ್ಮಾ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಪಕ್ಷದ ಕೇಂದ್ರ ವೀಕ್ಷಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಾಯಕನ ಆಯ್ಕೆ ನಡೆಯಲಿದೆ. ಆಯ್ಕೆಯಾದ ನಾಯಕರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆಯೂ ಇದೆ ಎಂದು ಶರ್ಮಾ ಹೇಳಿದ್ದಾರೆ.



