ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ದರ್ಶನಕ್ಕೆ ತೆರಳುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಸೌಲಭ್ಯ ಕಲ್ಪಿಸಿದೆ.
ಇನ್ಮುಂದೆ ಭಕ್ತರು ಸುಗಮ ದರ್ಶನದ ಪಾಸ್‌ಗಾಗಿ 90 ದಿನಗಳ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಕೇವಲ 15 ದಿನಗಳ ಮುಂಚಿತವಾಗಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು.
ಇದರೊಂದಿಗೆ ಆನ್‌ಲೈನ್ ಮೂಲಕ ಪ್ರತಿದಿನ ವಿತರಿಸಲಾಗುವ ಸುಗಮ ದರ್ಶನ ಪಾಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ ದಿನಕ್ಕೆ 975 ಪಾಸ್‌ಗಳನ್ನು ವಿತರಿಸಲಾಗುತ್ತಿತ್ತು. ಇದೀಗ ಈ ಸಂಖ್ಯೆಯನ್ನು 2,000ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
ಹೊಸ ವ್ಯವಸ್ಥೆಯಡಿ 90, 62, 30, 14, 7, 3 ಮತ್ತು 1 ದಿನಗಳ ಮುಂಚಿತವಾಗಿ ಒಟ್ಟು ಏಳು ಹಂತಗಳಲ್ಲಿ ಪಾಸ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ದರ್ಶನಕ್ಕೆ ತೆರಳುವ ದಿನವೇ ತುರ್ತು ಪಾಸ್ ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಮುಂಗಡವಾಗಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ 24ರಿಂದ 48 ಗಂಟೆಗಳ ಒಳಗಾಗಿ ಪಾಸ್ ದೃಢೀಕರಣದ ಮಾಹಿತಿ ನೀಡಲಾಗುತ್ತದೆ. ಪ್ರಮುಖವಾಗಿ, ಈ ಸುಗಮ ದರ್ಶನ ಪಾಸ್ ಸಂಪೂರ್ಣ ಉಚಿತವಾಗಿದ್ದು, ಭಕ್ತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಬದಲಾವಣೆಯಿಂದ ರಾಮಲಲ್ಲಾ ದರ್ಶನಕ್ಕೆ ಯೋಜನೆ ರೂಪಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.



