ಬೆಂಗಳೂರು: ರಾಜ್ಯದಲ್ಲಿ ಚಾರಣಕ್ಕೆ ತೆರಳಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ ಹೊಸ ನಿಯಮಗಳನ್ನು ಪ್ರಕಟಿಸಿದ್ದಾರೆ.
ಕೊಡಗು ಜಿಲ್ಲೆಯ ತಡಿಯಾಂಡಮೊಳ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಾರಣಿಗರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಹೊಸ ನಿಯಮಗಳು ಏನು?
ಹೊಸ SOP ಪ್ರಕಾರ, ಚಾರಣಿಗರು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಬುಕ್ಕಿಂಗ್ ಮಾಡಬೇಕು. ಪ್ರತಿ 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಚಾರಣಿಗರ ಮೊಬೈಲ್ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುತ್ತದೆ.
ಗೈಡ್ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
ಪ್ರತಿ ಚಾರಣ ಸ್ಥಳದಲ್ಲಿ ಒಮ್ಮೆ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ನಂತರವೇ ಮತ್ತೊಂದು ತಂಡವನ್ನು ಕಳುಹಿಸುವ ವ್ಯವಸ್ಥೆ ಜಾರಿಯಾಗಲಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.



