ಬೀದರ್: ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 45 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, 2017-18ನೇ ಸಾಲಿನ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಸೇರಿದ್ದಾರೆ.
ಏನಿದು ಹಗರಣ?
2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ವಿವಿಧ ಸಾಮಗ್ರಿಗಳ ಖರೀದಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಯಾವುದೇ ವಸ್ತುಗಳನ್ನು ಖರೀದಿಸದೇ ಖಾಸಗಿ ಎಂಟರ್‌ಪ್ರೈಸಸ್‌ಗಳ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಸಂಬಂಧ 2021ರಲ್ಲಿ ಲೋಕಾಯುಕ್ತ ಪೊಲೀಸರು ಮೊದಲ ಹಂತದ ದಾಳಿ ನಡೆಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಅಧಿಕಾರಿಗಳು 2025ರ ಸೆಪ್ಟೆಂಬರ್ 10ರಂದು ರಾಜ್ಯದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ತನಿಖೆ ವೇಳೆ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಸೇರಿ ಸಂಚು ರೂಪಿಸಿ ಅವ್ಯವಹಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಯೇಶ್ವರ ಹಾಗೂ ಎಸ್‌ಪಿ ಸಿ & ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.



