ಬೆಂಗಳೂರು: ನಗರದ ಐಷಾರಾಮಿ ಹೋಟೆಲ್‌ಗಳು, 3 ಸ್ಟಾರ್ ಹಾಗೂ 5 ಸ್ಟಾರ್ ಹೋಟೆಲ್‌ಗಳ ಅಡುಗೆಮನೆಗಳಲ್ಲಿ ಆಹಾರ ಸುರಕ್ಷತಾ ಉಲ್ಲಂಘನೆಗಳು ಪತ್ತೆಯಾದ ಬೆನ್ನಲ್ಲೇ, ಇದೀಗ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ವ್ಯಾಪ್ತಿಯ ಪಿಜಿ, ಹಾಸ್ಟೆಲ್, ರೆಸ್ಟೋರೆಂಟ್, ಡಾಬಾ ಹಾಗೂ ಆಹಾರ ತಯಾರಿಕಾ ಕೇಂದ್ರಗಳ ಮೇಲೆ ನಾಳೆಯಿಂದ ವಿಶೇಷ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಪಿಜಿಗಳ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಂಟಿ ತಂಡದಿಂದ ತಪಾಸಣೆ:
ಪಿಜಿ ವಸತಿಗೃಹಗಳ ಪರಿಶೀಲನೆಗಾಗಿ ಉಪನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಜಂಟಿ ತಂಡವನ್ನು ರಚಿಸಲಾಗಿದೆ. ಪ್ರತಿ ಪಿಜಿಯಲ್ಲೂ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಏನೆಲ್ಲ ಪರಿಶೀಲನೆ?
ತಪಾಸಣೆ ವೇಳೆ ಈ ಪ್ರಮುಖ ಅಂಶಗಳನ್ನು ಪರಿಶೀಲಿಸಲಾಗುತ್ತದೆ:
-
ಆಹಾರ ತಯಾರಿಕಾ ಸ್ಥಳಗಳ ಸ್ವಚ್ಛತೆ
-
ನೈರ್ಮಲ್ಯ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ
-
ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು
-
ವ್ಯಾಪಾರ ಪರವಾನಗಿ ಹಾಗೂ ಅಗತ್ಯ ಅನುಮತಿಗಳು
-
ಘನತ್ಯಾಜ್ಯ ನಿರ್ವಹಣೆ
-
ಸಾರ್ವಜನಿಕ ಆಸ್ತಿ ಒತ್ತುವರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ
-
ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ
ಯಾವುದೇ ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಸಿದೆ.
ಮೈಸೂರಿನಲ್ಲೂ ಮುಂದುವರಿದ ದಾಳಿ:
ಬೆಂಗಳೂರು ಬಳಿಕ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮೈಸೂರು ಹಾಗೂ ನಂಜನಗೂಡು ತಾಲೂಕಿನ ಮೂರು ರೆಸಾರ್ಟ್‌ಗಳಲ್ಲಿ ತಪಾಸಣೆ ನಡೆಸಿದ ವೇಳೆ 16 ಕೆಜಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಹಿನ್ನೆಲೆ ನೋಟಿಸ್ ನೀಡಲಾಗಿದ್ದು, ನಾಲ್ಕು ಹೋಟೆಲ್‌ಗಳ ಮೇಲೂ ಪರಿಶೀಲನೆ ನಡೆಸಲಾಗಿದೆ.



