ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಬೀರೂರಿನಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ದಶರಥ ಪೂಜಾರ್ ಅವರು ಈ ವರ್ಷದ ಕಾರ್ಣಿಕ ನುಡಿದರು.
“ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸೃಷ್ಟಿಗೆ ನಾಡು ಸಿರಿಯಾಯಿತು… ಮದಗಜಗಳು ಕಾದಾಡಿದರು, ಕತ್ತಲೆಯ ದೀಪಕ್ಕೆ ಬೆಳಕಾಯಿತು… ಸರ್ವರೂ ಎಚ್ಚರದಿಂದಿರಬೇಕು!” ಎಂಬ ದೈವವಾಣಿ ಮೊಳಗಿತು.
ಬೀರೂರು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿಗಳು ವರ್ಷದ ಭವಿಷ್ಯವನ್ನು ಸೂಚಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕಾರ್ಣಿಕೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಮಳೆ-ಬೆಳೆ, ರಾಜ್ಯದ ಬೆಳವಣಿಗೆ ಹಾಗೂ ದೇಶದ ಭವಿಷ್ಯದ ಸೂಚನೆಗಳನ್ನು ಕಾರ್ಣಿಕದ ಮೂಲಕ ತಿಳಿಯಬಹುದು ಎಂಬ ನಂಬಿಕೆಯಿಂದ ಭಕ್ತರು ಈ ದೈವವಾಣಿಯನ್ನು ಕುತೂಹಲದಿಂದ ಆಲಿಸಿದರು.



