ಬೀದರ್: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಕಾಲೇಜೊಂದರಲ್ಲಿ ಆ.15ರಂದು 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಧ್ವಜಾರೋಹಣದ ಬಳಿಕ ಪಿಯುಸಿ ವಿದ್ಯಾರ್ಥಿ ಸಾಗರ್ ಗೌಳಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ್ದ ಎನ್ನಲಾಗಿದೆ.
ಈ ವೇಳೆ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್ ಅವರು ವಿದ್ಯಾರ್ಥಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಘೋಷಣೆ ಕೂಗದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಧಾರ್ಮಿಕ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆ ಎಂದು ಹೇಳಿ, ಇಂತಹ ಘೋಷಣೆಗಳನ್ನು ಕಾಲೇಜಿನಲ್ಲಿ ಸಹಿಸುವುದಿಲ್ಲ ಎಂದು ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು ಎಂದು ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ಕಾಲೇಜಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಾಂಶುಪಾಲರು ವಿದ್ಯಾರ್ಥಿಗಳ ನಡುವೆ ಧಾರ್ಮಿಕ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ನಡೆ ವಿದ್ಯಾರ್ಥಿಗಳ ನಡುವೆ ವೈಮನಸ್ಸು ಮೂಡಿಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗೆ ಧಾರ್ಮಿಕ ತಾರತಮ್ಯ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕ ತಿಳಿದುಬರಬೇಕಿದೆ.



