ಬೆಂಗಳೂರು: ಕನ್ನಡದ ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರಕ್ಕೆ ಸಿನಿಮಾ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ವಿಜಯ್ ರಾಘವೇಂದ್ರ ಮತ್ತು ಪ್ರಿಯಾಂಕಾ ತಿಮ್ಮೇಶ್ ಅಭಿನಯದ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡುವವರಿಗೆ ವೀವ್ಸ್ ಆಧಾರದ ಮೇಲೆ ನಗದು ಬಹುಮಾನ ನೀಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ.
ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದೆ. ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳ ಬಳಿಕ ಹೆಚ್ಚು ವೀವ್ಸ್ ಪಡೆದ ರೀಲ್ಸ್ಗಳನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ.
ಹೆಚ್ಚು ವೀವ್ಸ್ ಪಡೆದವರಿಗೆ ₹10 ಸಾವಿರ ಮೊದಲ ಬಹುಮಾನ, ₹7,500 ಎರಡನೇ ಬಹುಮಾನ ಹಾಗೂ ₹5 ಸಾವಿರ ಮೂರನೇ ಬಹುಮಾನ ನೀಡಲಾಗುತ್ತದೆ. ಇದರ ಜತೆಗೆ ₹1 ಸಾವಿರ ಸಮಾಧಾನಕರ ಬಹುಮಾನವನ್ನೂ ಘೋಷಿಸಲಾಗಿದೆ. ರೀಲ್ಸ್ ಹಾಗೂ ವೀವ್ಸ್ ವಿವರಗಳನ್ನು 8553674555 ಮತ್ತು 9845642338 ಸಂಖ್ಯೆಗೆ ಕಳುಹಿಸಬೇಕಾಗಿದೆ.
ಇಷ್ಟೇ ಅಲ್ಲದೆ, ಹೆಚ್ಚು ವೀವ್ಸ್ ಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನದ ಜತೆಗೆ ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವಕ-ಯುವತಿಯರಿಗೆ ಈ ಆಫರ್ ವಿಶೇಷ ಅವಕಾಶವಾಗಿದೆ.
‘ರುದ್ರಾಭಿಷೇಕಂ’ ಗ್ರಾಮೀಣ ಹಿನ್ನೆಲೆಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವೀರಗಾಸೆ ಕಲಾವಿದ, ರುದ್ರನ ಅವತಾರ, ಹಳ್ಳಿಯ ಅಮಾಯಕ ಯುವಕ ಹಾಗೂ ಗಿರಿಜಾ ಮೀಸೆಯ ಖಡಕ್ ವ್ಯಕ್ತಿಯಂತಹ ಹಲವು ವಿಭಿನ್ನ ಗೆಟಪ್ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ವಸಂತ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದು, ಬಾಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ.



